ಭಾರತ- ಮಾಲ್ದೀವ್ಸ್ 6 ಪ್ರಮುಖ ಒಪ್ಪಂದಗಳಿಗೆ ಸಹಿ

Update: 2019-06-08 18:17 GMT

ಮಾಲೆ, ಜೂ.8: ಮಾಲ್ದೀವ್ಸ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಲ್ದೀವ್ಸ್‌ನ ಅಧ್ಯಕ್ಷ ಇಬ್ರಾಹಿಂ ಮುಹಮ್ಮದ್ ಸೋಲಿ ದ್ವಿಪಕ್ಷೀಯ ಸಂಬಂಧವೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು. ಬಳಿಕ ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ಉದ್ದೇಶದ 6 ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಹೈಡ್ರೋಗ್ರಾಫಿ (ಸಮುದ್ರ, ನದಿಗಳ ಬೌತಿಕ ಲಕ್ಷಣದ ಅಧ್ಯಯನ ನಡೆಸುವುದು) , ಆರೋಗ್ಯ, ಸಮುದ್ರದ ಮೂಲಕ ಪ್ರಯಾಣಿಕರ ಹಾಗೂ ಸರಕು ಸಾಗಾಣಿಕೆ ವ್ಯವಸ್ಥೆ ಕಲ್ಪಿಸುವುದು, ಭಾರತ ಹಾಗೂ ಮಾಲ್ದೀವ್ಸ್ ದೇಶಗಳ ಸೀಮಾ ಸುಂಕ(ಕಸ್ಟಮ್ಸ್)ಇಲಾಖೆಗಳ ಮಧ್ಯೆ ಸಹಕಾರ, ಮಾಲ್ದೀವ್ಸ್‌ನ ನಾಗರಿಕ ಸೇವಾ (ಸರಕಾರಿ ಸೇವೆ) ಇಲಾಖೆಯ ಸಾಮರ್ಥ್ಯ ವೃದ್ಧಿ, ನೌಕಾ ಸಂಚಾರ ಒಪ್ಪಂದಗಳಿಗೆ ಸಂಬಂಧಿಸಿದ ತಿುವಳಿಕಾ ಪತ್ರಕ್ಕೆ ಸಹಿ ಹಾಕಲಾಗಿದೆ.

ನೌಕಾ ಸಂಚಾರ ಒಪ್ಪಂದದಡಿ ಸಮುದ್ರದಲ್ಲಿ ಸಂಚರಿಸುವ ನೌಕೆಗಳ ಬಗ್ಗೆ ಭಾರತದ ನೌಕಾಪಡೆ ಹಾಗೂ ಮಾಲ್ದೀವ್ಸ್‌ನ ರಾಷ್ಟ್ರೀಯ ರಕ್ಷಣಾ ಪಡೆಯ ಮಧ್ಯೆ ಮಾಹಿತಿ ವಿನಿಮಯ ಸಾಧ್ಯವಾಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಲ್ದೀವ್ಸ್ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಕೊಚ್ಚಿಯಿಂದ ಮಾಲ್ದೀವ್ಸ್‌ಗೆ ನೌಕಾ ಸಂಚಾರ ವ್ಯವಸ್ಥೆ ಆರಂಭವಾಗಲಿದೆ. ಮಾಲ್ದೀವ್ಸ್‌ನಲ್ಲಿ ಆರಂಭಿಸಲಾಗಿರುವ ರೂಪೆ ಕಾರ್ಡ್ ನಿಂದಾಗಿ ದ್ವೀಪರಾಷ್ಟ್ರದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಲಿದೆ. ಮಾಲ್ದೀವ್ಸ್‌ನ ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸುವ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಭಾರತವು ಮಾಲ್ದೀವ್ಸ್‌ನೊಂದಿಗೆ ಬಲಿಷ್ಟ ಸಂಬಂಧ ಬಯಸುತ್ತಿದೆ. ಬಲಿಷ್ಟ ಮತ್ತು ಸಮೃದ್ಧ ಮಾಲ್ದೀವ್ಸ್ ಈ ಪ್ರದೇಶದ ಹಿತಾಸಕ್ತಿಗೆ ಪೂರಕವಾಗಿದೆ. ಎಂದು ಪ್ರಧಾನಿ ಮೋದಿ ಹೇಳಿದರು.

  ಇದಕ್ಕೂ ಮುನ್ನ, ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ , ನೆರೆಹೊರೆ ಪ್ರಥಮ ಎಂಬ ನೀತಿಯಂತೆ ತಮ್ಮ ಪ್ರಪ್ರಥಮ ವಿದೇಶ ಪ್ರವಾಸವಾಗಿ ಮಾಲ್ದೀವ್ಸ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಲೆ ವಿಮಾನ ನಿಲ್ದಾಣದಲ್ಲಿ ಮಾಲ್ದೀವ್ಸ್‌ನ ವಿದೇಶ ಸಚಿವ ಅಬ್ದುಲ್ಲಾ ಶಾಹಿದ್ ಹಾರ್ದಿಕವಾಗಿ ಸ್ವಾಗತಿಸಿದರು.

ಪ್ರಧಾನಿ ಮೋದಿ ಮಾಲೆಗೆ ಆಗಮಿಸಿದ್ದು ಅವರನ್ನು ಮಾಲ್ದೀವ್ಸ್‌ನ ವಿದೇಶ ಸಚಿವರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಈ ಹಿಂದೆ 2018ರ ನವೆಂಬರ್‌ನಲ್ಲಿ ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹಿಂ ಸೋಲಿ ಅವರ ಪದಗ್ರಹಣ ಸಮಾರಂಭಕ್ಕೆ ಮೋದಿ ಆಗಮಿಸಿದ್ದರು ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರರ ವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

   ಉಭಯ ರಾಷ್ಟ್ರಗಳ ಮುಖಂಡರು ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ನೆರವು, ನೀರು ಸರಬರಾಜು ಮತ್ತು ಚರಂಡಿ ವ್ಯವಸ್ಥೆಯ ಯೋಜನೆಗಳಿಗೆ ಸಾಲದ ವ್ಯವಸ್ಥೆ ಮುಂದುವರಿಕೆ, ಉನ್ನತ ಪರಿಣಾಮದ ಸಮುದಾಯ ಅಭಿವೃದ್ಧಿ ಯೋಜನೆಗೆ ನೆರವು ಮುಂತಾದ ಕುರಿತು ಚರ್ಚೆ ನೆಸಿದರು ಎಂದು ಮೂಲಗಳು ತಿಳಿಸಿವೆ.

ಉಭಯ ದೇಶಗಳ ಜನರ ನಡುವಿನ ಸಂಪರ್ಕ ವೃದ್ಧಿಸಲು ಕ್ರಿಕೆಟ್ ರಾಜತಾಂತ್ರಿಕತೆಗೆ ಪ್ರಧಾನಿ ಮೋದಿ ಒಲವು ತೋರಿದ್ದಾರೆ. ಇದರ ಅನ್ವಯ ಮಾಲ್ದೀವ್ಸ್‌ನಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಭಾರತ ನೆರವಾಗಲಿದೆ.

ದಕ್ಷಿಣ ಮಾಲ್ದೀವ್ಸ್‌ನಲ್ಲಿ ಮಸೀದಿ

ದಕ್ಷಿಣ ಮಾಲ್ದೀವ್ಸ್‌ನಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲು ಮಸೀದಿ ನಿರ್ಮಿಸುವ ಯೋಜನೆಗೆ ಭಾರತ ಒಪ್ಪಿಗೆ ನೀಡಿದೆ. ದಕ್ಷಿಣ ಮಾಲ್ದೀವ್‌ನಲ್ಲಿ ನಗರಾಭಿವೃದ್ಧಿ ಕೇಂದ್ರವನ್ನೂ ಆರಂಭಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News