ದೇರಳಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರವೇಶಾತಿ ಗೊಂದಲ : ಕ್ಯಾಂಪಸ್ ಫ್ರಂಟ್ ನಿಯೋಗ ಭೇಟಿ

Update: 2019-06-09 08:04 GMT

ದೇರಳಕಟ್ಟೆ: ರಾಜ್ಯ ಸರ್ಕಾರ ಹೊಸದಾಗಿ ಈ ವರ್ಷ ಜಾರಿಗೊಳಿಸಿರುವ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಕೆ ಯೋಜನೆಯಡಿ ದ.ಕ ಜಿಲ್ಲೆಯ ದೇರಳಕಟ್ಟೆ ಶಾಲೆಯಲ್ಲಿ ದಾಖಲಾತಿಗೆ ಆಹ್ವಾನಿಸಲಾಗಿತ್ತು. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಿದ್ದರಿಂದ ದಾಖಲುಗೊಂಡ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವುದಿಲ್ಲ ಎಂಬ ಗೊಂದಲ ಕೂಡಾ ಕೇಳಿಬಂದಿತ್ತು.

ಈ ಕುರಿತು ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾ ನಿಯೋಗ ಭೇಟಿ  ನೀಡಿ ಶಾಲಾ ಶಿಕ್ಷಕರು ಹಾಗೂ ಶಾಲಾಭಿವೃಧ್ದಿ ಸಮಿತಿಯ ಅಧ್ಯಕ್ಷರೊಂದಿಗೆ ಘಟನೆಯ ಕುರಿತು ಮಾತುಕತೆ ನಡೆಸಿತು.  ಇಲಾಖೆಯು ಮೊದಲಿಗೆ ದಾಖಾಲಾತಿ ಮಿತಿಯ ಕುರಿತು ಯಾವುದೇ ಮುನ್ಸೂಚನೆ ನೀಡದೆ ನಂತರ ದಾಖಲಾತಿ ಅವಧಿ ಮುಗಿಯುವಾಗ ಒಬ್ಬ ಶಿಕ್ಷಕರಿಗೆ 30 ಮಕ್ಕಳ ಅನುಪಾತದಂತೆ ದಾಖಲಾತಿ ನಡೆಸತಕ್ಕದ್ದು ಎಂಬ ಆದೇಶ ಹೊರಡಿಸಿದ್ದರಿಂದ ಈ ರೀತಿಯ ಗೊಂದಲಗಳು ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಈಗಾಗಲೆ ಆಡಳಿತ ಸಮಿತಿ ಈ ಕುರಿತು ಸಭೆ ಕರೆದು ದಾಖಲುಗೊಂಡ ಮಕ್ಕಳಿಗೆ ಕೊಠಡಿ ವ್ಯವಸ್ಥೆ ಹಾಗೂ ಹೆಚ್ಚುವರಿ ಶಿಕ್ಷಕರನ್ನು ನೇಮಿಸುವಂತೆ ಪ್ರಸ್ತಾವನೆ ಸಲ್ಲಿಸಿ ಮಕ್ಕಳಿಗೆ ಯಾವುದೇ ರೀತಿ ಅನ್ಯಾಯ ಆಗದಂತೆ ಶಿಕ್ಷಣ ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಮೇಲುಸ್ತುವಾರಿ ಹಾಗೂ  ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಭರವಸೆ ನೀಡಿದ್ದಾರೆ.

ಈ ಒಂದು ಘಟನೆಯಲ್ಲಿ ಶಿಕ್ಷಣ ಇಲಾಖೆಯ  ವ್ಯೆಫಲ್ಯಗಳು ಎದ್ದು ಕಾಣುತ್ತಿದ್ದು ಮುಂದಿನ ದಿನಗಳಲ್ಲಿ ಈ ರೀತಿ ನಡೆಯದಂತೆ ಪೂರ್ವಸಿದ್ಧತೆಗಳನ್ನು ನಡೆಸಬೇಕು. ಶಾಲಾ ಅಭಿವೃದ್ಧಿಗೆ ಈಗಾಗಲೇ ಮಂಜೂರಾದ ಹಣವನ್ನು ಶೀಘ್ರ ಬಿಡುಗಡೆಗೊಳಿಸಿ ಮಕ್ಕಳಿಗೆ ಮೂಲಭೂತ ಸೌಕರ್ಯ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಂತೆ ಕ್ಯಾಂಪಸ್ ಫ್ರಂಟ್ ಜಿಲ್ಲಾ ಕಾರ್ಯದರ್ಶಿ ನಿಝಾಮುದ್ದೀನ್ ಆಗ್ರಹಿಸಿದ್ದಾರೆ.

ನಿಯೋಗದಲ್ಲಿ ಜಿಲ್ಲಾ  ಸಮಿತಿ ಸದಸ್ಯರಾದ ಫಹದ್ ಅನ್ವರ್ ಹಾಗೂ ಸುಹೇಲ್ ಮತ್ತು  ಮಂಗಳೂರು  ತಾಲೂಕು ಸಮಿತಿ ಸದಸ್ಯ ಉವೈಝ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News