×
Ad

ಆದಿತ್ಯನಾಥ್ ಜೊತೆ ಸಂಬಂಧವಿದೆ ಎಂದ ಮಹಿಳೆಯ ವಿಡಿಯೋ ಪ್ರಸಾರ: ಮೂವರು ಪತ್ರಕರ್ತರ ಬಂಧನ

Update: 2019-06-09 19:39 IST

ಹೊಸದಿಲ್ಲಿ,ಜೂ.9: ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕುರಿತು ಅವಮಾನಕಾರಿ ವಿಷಯವನ್ನು ಹರಡಿದ ಆರೋಪದಲ್ಲಿ ಮೂವರು ಪತ್ರಕರ್ತರನ್ನು ಬಂಧಿಸಿರುವ ಉತ್ತರ ಪ್ರದೇಶ ಪೊಲೀಸರ ಕ್ರಮವನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ(ಇಜಿಐ) ರವಿವಾರ ಟೀಕಿಸಿದೆ.

  ಆದಿತ್ಯನಾಥರ ವರ್ಚಸ್ಸಿಗೆ ಹಾನಿಯನ್ನುಂಟು ಮಾಡಿದ್ದಕ್ಕಾಗಿ ಪತ್ರಕರ್ತ ಪ್ರಶಾಂತ ಕನೋಜಿಯಾ ಅವರನ್ನು ಶನಿವಾರ ದಿಲ್ಲಿಯಲ್ಲಿ ಬಂಧಿಸಲಾಗಿದೆ. ತಾನು ಆದಿತ್ಯನಾಥರನ್ನು ಮದುವೆಯಾಗಲು ಬಯಸಿದ್ದೇನೆ ಎಂದು ಹೇಳಿಕೊಂಡ ಮಹಿಳೆಯ ವೀಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಈ ಬಂಧನವಾಗಿದೆ. ತಾನು ವೀಡಿಯೊ ಚಾಟ್ ಮೂಲಕ ಆದಿತ್ಯನಾಥ್ ರೊಂದಿಗೆ ಮಾತನಾಡುತ್ತಿದ್ದೇನೆ ಮತ್ತು ಅವರಿಗೆ ಮದುವೆಯ ಪ್ರಸ್ತಾವ ಕಳುಹಿಸಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದರು. ರವಿವಾರ ಈ ವೀಡಿಯೊವನ್ನು ಪ್ರಸಾರಿಸಿದ್ದಕ್ಕಾಗಿ ನೇಷನ್ ಲೈವ್ ಸುದ್ದಿವಾಹಿನಿಯ ಮುಖ್ಯಸ್ಥೆ ಇಷಿತಾ ಸಿಂಗ್ ಮತ್ತು ಸಂಪಾದಕ ಅನುಜ್ ಶುಕ್ಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವಾಹಿನಿಯು ಕಾರ್ಯಾಚರಣೆಗೆ ಅಗತ್ಯ ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

 ಪೊಲೀಸ್ ಕ್ರಮವು ಅತಿರೇಕದ್ದು ಮತ್ತು ನಿರಂಕುಶಾಧಿಕಾರದ್ದಾಗಿದೆ. ಕಾನೂನನ್ನು ರಾಜಾರೋಷವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದು ಮಾಧ್ಯಮಗಳನ್ನು ಬೆದರಿಸುವ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಧ್ವನಿಯನ್ನಡಗಿಸುವ ಪ್ರಯತ್ನವಾಗಿದೆ ಎಂದು ಗಿಲ್ಡ್ ಹೇಳಿದೆ.

 ಮಹಿಳೆಯ ಹೇಳಿಕೆಯ ಸತ್ಯಾಸತ್ಯತೆಗಳ ಬಗ್ಗೆ ಪ್ರಶ್ನೆಗಳಿದ್ದರೂ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿ ಕೊಂಡಿದ್ದಕ್ಕಾಗಿ ಮತ್ತು ಟಿವಿಯಲ್ಲಿ ಪ್ರಸಾರಿಸಿದ್ದಕ್ಕಾಗಿ ಪತ್ರಕರ್ತರ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ದಾಖಲಿಸಿರುವುದು ಕಾನೂನಿನ ದುರ್ಬಳಕೆಯಾಗಿದೆ ಎಂದು ಗಿಲ್ಡ್ ಖಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News