ವಿದ್ಯುತ್‌ಗೆ ಸೂರ್ಯನ ಬೆಳಕೇ ನಮಗೆ ಪರ್ಯಾಯ: ಡಾ. ಹೆಗ್ಗಡೆ

Update: 2019-06-09 14:23 GMT

ಅಮಾಸೆಬೈಲು, ಜೂ. 9: ವಿದ್ಯುತ್‌ನ ಅತಿ ಬಳಕೆ ನಮಗೆ ಅಭ್ಯಾಸವಾಗಿರು ವುದರಿಂದ ಇಂದು ವಿದ್ಯುತ್ ಕೊರತೆ ಕಾಣಿಸಿಕೊಂಡಿದೆ. ಇದಕ್ಕಿರುವ ಏಕೈಕ ಪರ್ಯಾಯ ಸೂರ್ಯನ ಬೆಳಕು. ಅಮಾಸೆಬೈಲು ಗ್ರಾಮದಲ್ಲಿ ಸೂರ್ಯನ ಬೆಳಕಿನ ಪ್ರಯೋಜನವನ್ನು ನಾವು ಕಾಣುತಿದ್ದೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ಣಾಟಕ ಬ್ಯಾಂಕ್ ಮಂಗಳೂರು, ಅಮಾಸೆಬೈಲು ಗ್ರಾಪಂ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಜಿಲ್ಲಾಡಳಿತ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಮಾಸೆಬೈಲು ಗ್ರಾಪಂ ವ್ಯಾಪ್ತಿಯ ಅಮಾಸೆಬೈಲು, ಮಚ್ಚಟ್ಟು ಹಾಗೂ ರಟ್ಟಾಡಿ ಗ್ರಾಮಗಳಲ್ಲಿ ಅನುಷ್ಠಾನಗೊಳಿಸಿ ರುವ ಸೋಲಾರ್ ದೀಪಗಳ ಕೊಡುಗೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದರು.

ಮಾನವ ಜೀವನಾವಶ್ಯಕ ವಸ್ತುಗಳ ಬೇಕಾಬಿಟ್ಟಿ ಬಳಕೆಯಿಂದ ಇಂದು ಈ ವಸ್ತುಗಳಿಗಾಗಿ ಹಾಹಾಕಾರ ಪ್ರಾರಂಭವಾಗಿದೆ. ನೀರು ಹಾಗೂ ವಿದ್ಯುತ್ ಇದಕ್ಕೆ ಉತ್ತಮ ಉದಾಹರಣೆ. ಗಾಂಧೀಜಿಯವರ ಗ್ರಾಮಸ್ವರಾಜದಿಂದ ಸ್ಪೂರ್ತಿ ಪಡೆದಿರುವ ಟ್ರಸ್ಟ್‌ನ ಅಧ್ಯಕ್ಷ ಎ.ಜಿ.ಕೊಡ್ಗಿ ಅವರು ತಮ್ಮ ಅಮಾಸೆಬೈಲು ಗ್ರಾಮ ಇಂಧನದಲ್ಲಿ ಸ್ವಾವಲಂಬಿಯಾಗಬೇಕೆಂದು ಪ್ರಾರಂಭಿಸಿದ ಸೋಲಾರ್ ದೀಪಗಳ ಯೋಜನೆ ಇಂದು ಸೋಲಾರ್ ದೀಪಗಳ ಬಳಕೆಗೆ ಅಮಾಸೆಬೈಲ್ ಮಾದರಿ ಯಾಗಿ ದೇಶಕ್ಕೆ ಖ್ಯಾತಿಯನ್ನು ಪಡೆದಿದೆ ಎಂದರು.

ಆಶೀರ್ವಚನ ನೀಡಿದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀ ಮಾತನಾಡಿ, ಹಿರಿಯರಾದ ಎ.ಜಿ.ಕೊಡ್ಗಿ ನೇತೃತ್ವದಲ್ಲಿ ಅಮಾಸೆಬೈಲ್ ಗ್ರಾಪಂ ವ್ಯಾಪ್ತಿಯಲ್ಲಿ ಇಂದು ನಡೆಸಿರುವ ಸೋಲಾರ್ ಕ್ರಾಂತಿ, ಸಮಾಜ ಸೇವಕರು ಎಲ್ಲಾ ಗ್ರಾಮಗಳಲ್ಲೂ ಇಂಥ ಕ್ರಾಂತಿ ನಡೆಸಲು ಸ್ಪೂರ್ತಿಯಾಗಿದೆ. ಈ ಮೂಲಕ ಕೊಡ್ಗಿ ಅವರು ಅಧಿಕಾರ ರಾಜಕಾರಣದಿಂದ ದೂರವಾಗಿ ಸೇವಾ ರಾಜಕಾರಣ ದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ ಎಂದರು.

ಮಲೆನಾಡು ಪ್ರದೇಶಗಳ ಅತ್ಯಂತ ಗ್ರಾಮೀಣ ಭಾಗಗಳಲ್ಲಿ ತಾವು ಹಲವು ಬಡಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡುವ ಕಾರ್ಯ ಮಾಡುತಿದ್ದು, ಅಮಾಸೆಬೈಲ್ ಮಾದರಿಯಿಂದ ಸ್ಪೂರ್ತಿ ಪಡೆದು ಇನ್ನು ಮುಂದೆ ಅಲ್ಲಿ ಸೋಲಾರ್ ದೀಪಗಳನ್ನು ನೀಡುವುದಕ್ಕೆ ಸಂಕಲ್ಪ ಮಾಡಿದ್ದೇವೆ ಎಂದು ಪೇಜಾವರಶ್ರೀ ನುಡಿದರು.

ಮ್ಯಾಗ್ಸಸೆ ಪ್ರಶಸ್ತಿ ವಿಜೇತ, ಸೆಲ್ಕೋ ಇಂಡಿಯಾದ ಅಧ್ಯಕ್ಷ ಡಾ.ಎಚ್.ಹರೀಶ್ ಹಂದೆ ಅವರು ಸೌರವಿದ್ಯುತ್ ಸಾಧ್ಯತೆಯ ಕುರಿತು ದಿಕ್ಸೂಚಿ ಭಾಷಣ ಮಾಡಿದರು.

ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಸಿಇಓ ಮಹಾಬಲೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಿಧಾನಪರಿಷತ್‌ನಲ್ಲಿ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕರ್ಣಾಟಕ ಬ್ಯಾಂಕಿನ ನಿವೃತ್ತ ಅಧ್ಯಕ್ಷ ಅನಂತಕೃಷ್ಣ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಕೆಎಂಎಫ್ ಮಂಗಳೂರು ಇದರ ಅಧ್ಯಕ್ಷ ರವಿರಾಜ ಹೆಗ್ಡೆ, ಮಾಜಿ ಶಾಸಕ ಬಸರೂರು ಅಪ್ಪಣ್ಣ ಹೆಗ್ಡೆ, ಅಮಾಸೆಬೈಲು ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಶೆಡ್ತಿ, ಪಿಡಿಓ ಸತೀಶ್ ನಾಯ್ಕಿ, ಅಮಾಸೆಬೈಲು ಸರಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರಾದ ತಿಮ್ಮಪ್ಪ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ, ಟ್ರಸ್ಟ್‌ನ ಸದಸ್ಯ ನರಸಿಂಹ ಶೆಟ್ಟಿ ಉಪಸ್ಥಿತರಿದ್ದರು.

ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ, ಮಾಜಿ ಶಾಸಕ ಎ.ಜಿ.ಕೊಡ್ಗಿ ಅತಿಥಿಗಳನ್ನು ಸ್ವಾಗತಿಸಿ, ಟ್ರಸ್ಟ್ ಮೂಲಕ ಕಳೆದ ಮೂರು ವರ್ಷಗಳಲ್ಲಿ ಗ್ರಾಮದ 1497 ಮನೆಗಳು, 20 ಬೀದಿ ದೀಪ ಹಾಗೂ 29 ದೇವಸ್ಥಾನಗಳಿಗೆ ಅಳವಡಿಸಿದ ಸೋಲಾರ್ ದೀಪಗಳ ಕುರಿತು ಮಾಹಿತಿಗಳನ್ನು ನೀಡಿದರು. ಚೇತನಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಸೌರ ವಿದ್ಯುತ್ ಬಳಕೆಗೆ ಕರ್ನಾಟಕ ವಿಶ್ವಕ್ಕೆ ಮಾದರಿ

ವಿಶ್ವದ 125 ಕೋಟಿ ಹಾಗೂ ಭಾರತದ 25 ಕೋಟಿ ಜನರಿಗೆ ಇನ್ನೂ ವಿದ್ಯುತ್ ಸಂಪರ್ಕ ಲಭಿಸಿಲ್ಲ. ದೇಶದಲ್ಲಿ ಎ.ಜಿ.ಕೊಡ್ಗಿಯಂಥ 100 ಮಂದಿ ಇದ್ದಿದ್ದರೆ ಎಲ್ಲರಿಗೂ ಸೋಲಾರ್ ದೀಪಗಳಾದರೂ ಸಿಗುತ್ತಿತ್ತು. ಸೌರ ವಿದ್ಯುತ್‌ಗೆ ಸಂಬಂಧಿಸಿದಂತೆ ಇಂದು ಕರ್ನಾಟಕ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಸೌರವಿದ್ಯುತ್ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಪ್ರತಿಷ್ಠಿತ ಮ್ಯಾಗ್ಸಸೆ ಪ್ರಶಸ್ತಿ ಪಡೆದಿರುವ ಸೆಲ್ಕೋ ಇಂಡಿಯಾದ ಅಧ್ಯಕ್ಷ ಡಾ.ಎಚ್.ಹರೀಶ್ ಹಂದೆ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಕರ್ನಾಟಕದ ಅಮಾಸೆಬೈಲು ಮಾದರಿ, ಕರ್ಣಾಟಕ ಬ್ಯಾಂಕ್ ಮಾದರಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾದರಿಗಳು ಇಡೀ ವಿಶ್ವದ ಗಮನವನ್ನು ಸೆಳೆದಿವೆ ಎಂದರು. ಇವುಗಳ ಅಧ್ಯಯನಕ್ಕಾಗಿ ಯುರೋಪ್, ಆಫ್ರಿಕನ್ ದೇಶಗಳು ಈಗಾಗಲೇ ಇಲ್ಲಿಗೆ ಆಗಮಿಸಿವೆ. ಜರ್ಮನಿ ತಂಡ ಶೀಘ್ರವೇ ಬರಲಿದೆ ಎಂದರು.

ನಮ್ಮನ್ನಿಂದು ಅತೀಯಾಗಿ ಕಾಡುತ್ತಿರುವ ನೀರಿನ ಹಾಗೂ ವಿದ್ಯುತ್ ಸಮಸ್ಯೆ ಗಳನ್ನು ಸೌರ ವಿದ್ಯುತ್ ಪರಿಹರಿಸುವ ಸಾಧ್ಯತೆ ಇದೆ ಎಂದು ಡಾ.ಹಂದೆ ಅಭಿಪ್ರಾಯಪಟ್ಟರು. ಸಂಪೂರ್ಣ ಸೋಲಾರ್ ಗ್ರಾಮವಾಗಿರುವ ಅಮಾಸೆಬೈಲು ಮಾದರಿ ಉಳಿದ ಗ್ರಾಮಗಳಿಗೂ ಮಾದರಿಯಾಗಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News