ಸರ್ದಾರ್ ಪಟೇಲರಂತೆ ಮೋದಿ ಮರಾಠಾವಾಡದ ಪರ ನಿಲ್ಲಲಿ: ಠಾಕ್ರೆ

Update: 2019-06-09 16:00 GMT

ಮುಂಬೈ, ಜೂ.9: ದೇಶದ ಪ್ರಥಮ ಗೃಹ ಸಚಿವ ವಲ್ಲಭಬಾಯಿ ಪಟೇಲರಂತೆ ಪ್ರಧಾನಿ ಮೋದಿಯವರೂ ಮಹಾರಾಷ್ಟ್ರದ ಮರಾಠಾವಾಡ ಪ್ರದೇಶಕ್ಕೆ ಆಸರೆಯಾಗಿರಬೇಕು ಎಂದು ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಔರಂಗಾಬಾದ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸ್ವಾತಂತ್ರ್ಯ ದೊರೆತ ಬಳಿಕ ಮರಾಠಾವಾಡ ಪ್ರದೇಶವು ದೇಶದೊಂದಿಗೆ ವಿಲೀನಗೊಳ್ಳಲು ಪಟೇಲರ ಇಚ್ಛಾಶಕ್ತಿ ಪ್ರಮುಖ ಕಾರಣವಾಗಿತ್ತು. ಅವರು ಎಂದೆಂದಿಗೂ ಮರಾಠಾವಾಡಕ್ಕೆ ಆಸರೆಯಾಗಿದ್ದರು. ಇದೇ ರೀತಿ ಪ್ರಧಾನಿ ಮೋದಿಯವರೂ ಮರಾಠಾವಾಡಕ್ಕೆ ನೆರವಾಗಲಿ ಎಂದರು.

 ಮರಾಠಾವಾಡದಲ್ಲಿರುವ ಬರ ಪರಿಸ್ಥಿತಿಯ ಅವಲೋಕನ ನಡೆಸಿದ್ದು, ಇಲ್ಲಿರುವ ಹಲವು ರೈತರು ಸರಕಾರದ ಬೆಳೆ ವಿಮೆ ಯೋಜನೆಯ ಪ್ರಯೋಜನ ಪಡೆದಿಲ್ಲ ಎಂದ ಠಾಕ್ರೆ, ಬೆಳೆ ವಿಮೆ ಯೋಜನೆಯ ಪ್ರಯೋಜನ ರೈತರಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಆಗ್ರಹಿಸಿದರು.

ಔರಂಗಾಬಾದ್ ಸೇರಿದಂತೆ ಎಂಟು ಜಿಲ್ಲೆಗಳನ್ನು ಹೊಂದಿರುವ ಮರಾಠಾವಾಡ ಕಡಿಮೆ ಮಳೆಯಾಗುವ ಪ್ರದೇಶವಾಗಿದ್ದು ಈ ಬಾರಿ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಔರಂಗಾಬಾದ್ ಕ್ಷೇತ್ರದಲ್ಲಿ ಶಿವಸೇನೆಯ ಅಭ್ಯರ್ಥಿ , ನಾಲ್ಕು ಬಾರಿಯ ಸಂಸದ ಚಂದ್ರಕಾಂತ್ ಖೈರೆ ಎಐಎಂಐಎಂನ ಇಮ್ತಿಯಾಝ್ ಜಲೀಲ್ ಎದುರು ಸೋತಿರುವುದನ್ನು ಉಲ್ಲೇಖಿಸಿದ ಠಾಕ್ರೆ, ಇದು ತನ್ನ ಸೋಲಾಗಿದೆ. ಮುಂದಿನ ಬಾರಿ ಈ ಕ್ಷೇತ್ರವನ್ನು ಮರಳಿ ಪಡೆಯುವ ವಿಶ್ವಾಸವಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News