“ಬ್ರಾಹ್ಮಣರನ್ನು ಕೀಳಾಗಿ ಬಿಂಬಿಸಲಾಗಿದೆ”: ‘ಆರ್ಟಿಕಲ್ 15’ ವಿರುದ್ಧ ದೂರು

Update: 2019-06-10 14:14 GMT

ಮುಝಫ್ಫರ್‌ಪುರ,ಜೂ.10: ಬಾಲಿವುಡ್ ನಟ ಆಯುಷ್ಮಾನ್ ಖುರಾನ್ನಾ ಅಭಿನಯದ ಚಿತ್ರ ‘ಆರ್ಟಿಕಲ್ 15’ರಲ್ಲಿ ಬ್ರಾಹ್ಮಣರನ್ನು ಅವಮಾನಕಾರಿ ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಆರೋಪಿಸಿ ವಕೀಲ ಶಿವಕುಮಾರ ಝಾ ಎನ್ನುವವರು ಇಲ್ಲಿಯ ನ್ಯಾಯಾಲಯದಲ್ಲಿ ದೂರು ಅರ್ಜಿಯನ್ನು ಸಲ್ಲಿಸಿದ್ದಾರೆ.

 ಅನುಭವ ಸಿನ್ಹಾ ನಿರ್ದೇಶನದ ಚಿತ್ರದ ಪ್ರೋಮೊವನ್ನು ಯು ಟ್ಯೂಬ್‌ನಲ್ಲಿ ವೀಕ್ಷಿಸಿದ ಬಳಿಕ ಬ್ರಾಹ್ಮಣನಾಗಿರುವ ತನ್ನ ಭಾವನೆಗಳಿಗೆ ನೋವುಂಟಾಗಿದೆ ಎಂದು ಝಾ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.

ಚಿತ್ರವು ಜಾತಿಗಳ ನಡುವೆ ಕೋಮು ಉದ್ವಿಗ್ನತೆಗೆ ಕಾರಣವಾಗಬಹುದು ಎಂಬ ಭೀತಿಯನ್ನು ವ್ಯಕ್ತಪಡಿಸಿರುವ ಅವರು, ಚಿತ್ರದಲ್ಲಿ ನಿರ್ದಿಷ್ಟ ದಲಿತ ಸಮುದಾಯವೊಂದರ ವಿರುದ್ಧ ಅವಮಾನಕಾರಿ ಪ್ರಸ್ತಾವವೂ ಇದೆ ಎಂದು ಹೇಳಿದ್ದಾರೆ.

ಖುರಾನ್ನಾ, ಸಿನ್ಹಾ ಹಾಗೂ ಸಂಗೀತ ನಿರ್ದೇಶಕರಾದ ಅನುರಾಗ ಸೈಕಿಯಾ ಮತ್ತು ಮಂಗೇಶ ಧಾಕ್ಡೆ ಸೇರಿದಂತೆ ಚಿತ್ರತಂಡದ ಸದಸ್ಯರನ್ನು ತನ್ನ ದೂರಿನಲ್ಲಿ ಹೆಸರಿಸಿರುವ ಝಾ,ಐಪಿಸಿಯಡಿ ಅವರ ವಿರುದ್ಧ ಕ್ರಿಮಿನಲ್ ಕಲಾಪವನ್ನು ಜರುಗಿಸುವಂತೆ ಕೋರಿದ್ದಾರೆ.

ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಜೂ.17ಕ್ಕೆ ನಿಗದಿಗೊಳಿಸಿದೆ.

ಈ ತಿಂಗಳು ಬಿಡುಗಡೆಯಾಗಲಿರುವ ‘ಆರ್ಟಿಕಲ್ 15’ ಸಂವಿಧಾನದ ವಿಧಿ 15ರಡಿ ನಿಷೇಧಿಸಲಾಗಿರುವ ಜಾತಿ,ಧರ್ಮ ಮತ್ತು ಲಿಂಗ ಆಧಾರಿತ ಸಾಮಾಜಿಕ ತಾರತಮ್ಯವನ್ನು ಆಧರಿಸಿ ನಿರ್ಮಾಣಗೊಂಡಿದೆ.

 ಉತ್ತರ ಪ್ರದೇಶದಲ್ಲಿ ಇಬ್ಬರು ಹದಿಹರೆಯದ ಬಾಲಕಿಯರನ್ನು ಕೊಂದು ಮರಕ್ಕೆ ನೇತುಹಾಕಿದ್ದ ಕುಖ್ಯಾತ ಬದಾಯುನ್ ಸಾಮೂಹಿಕ ಅತ್ಯಾಚಾರ ಮತ್ತು ಗುಜರಾತಿನ ಉನಾದಲ್ಲಿ ಸತ್ತ ದನದ ಚರ್ಮವನ್ನು ಸುಲಿಯುತ್ತಿದ್ದ ದಲಿತರನ್ನು ಗೋರಕ್ಷರ ಗುಂಪು ಥಳಿಸಿದ್ದ ಪ್ರಕರಣಗಳಂತಹ ನೈಜ ಘಟನೆಗಳಿಂದ ಈ ಚಿತ್ರವು ಸ್ಫೂರ್ತಿ ಪಡೆದಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News