ತಂದೆಯಂತೆಯೇ ಬಹುಮುಖ ಪ್ರತಿಭೆಯ ಪುತ್ರ ರಘು ಕಾರ್ನಾಡ್

Update: 2019-06-10 14:45 GMT

ಗಿರೀಶ್ ಕಾರ್ನಾಡ್ ಅವರ ಪುತ್ರ ರಘು ಕಾರ್ನಾಡ್ ತಂದೆಯಂತೆಯೇ ಬಹುಮುಖ ಪ್ರತಿಭೆ. ಇಂಗ್ಲೀಷ್ ಪತ್ರಿಕೋದ್ಯಮದಲ್ಲಿ ಸಣ್ಣ ವಯಸ್ಸಲ್ಲೇ ದೊಡ್ಡ ಹೆಸರು ಮಾಡಿರುವ ಪತ್ರಕರ್ತ. ಲೇಖಕರಾಗಿಯೂ ಪ್ರಸಿದ್ಧಿ ಪಡೆದಿರುವ ರಘು ತಮ್ಮ ಚೊಚ್ಚಲ ಕೃತಿಗೆ ಪ್ರತಿಷ್ಠಿತ ಅಂತರ್ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾದವರು. ಬೆಂಗಳೂರಿನಲ್ಲೇ ಬೆಳೆದ ರಘು ಬಳಿಕ ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗು ಆಕ್ಸ್ ಫರ್ಡ್ ವಿವಿಯಲ್ಲಿ ಉನ್ನತ ಅಧ್ಯಯನ ಮಾಡಿದರು. 

ರಾಜಕೀಯ, ಸಂಸ್ಕೃತಿ, ಭಾಷೆ, ಇತಿಹಾಸ, ಸಂಶೋಧನೆ, ತಂತ್ರಜ್ಞಾನ, ಕ್ರೀಡೆ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಆಳವಾದ ಆಸಕ್ತಿ ಇಟ್ಟುಕೊಂಡು ಗಂಭೀರ ಕಾಳಜಿಯ ಅಧ್ಯಯನ ಮಾಡಿದವರು ರಘು. ಹಾಗಾಗಿ ಅವರ ಬರಹಗಳ ವ್ಯಾಪ್ತಿಯೂ ಅಷ್ಟೇ ವಿಶಾಲವಾದದ್ದು. ಎರಡನೇ ಮಹಾ ಯುದ್ಧದಲ್ಲಿ ಪಾಲ್ಗೊಂಡ ಭಾರತೀಯ ಕುಟುಂಬವೊಂದರ ಮೂವರು ಯೋಧರ ಬಗ್ಗೆ ರಘು ಕಾರ್ನಾಡ್ ಬರೆದಿರುವ  'Farthest Field: An Indian Story of the Second World War ಪುಸ್ತಕಕ್ಕೆ ಯೇಲ್ ವಿಶ್ವವಿದ್ಯಾಲಯ ನೀಡುವ ಪ್ರತಿಷ್ಠಿತ ವಿಂಧಾಮ್ ಕ್ಯಾಂಬೆಲ್ ಪ್ರಶಸ್ತಿ ಸಿಕ್ಕಿದೆ. ಇದೇ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪ್ರಶಸ್ತಿಯೂ ಬಂದಿದೆ. ಭೋಪಾಲ್ ಅನಿಲ ದುರಂತದಲ್ಲಿ ಉಳಿದ ವಿಷಕಾರಿ ತ್ಯಾಜ್ಯದಿಂದ ಅಂತರ್ಜಲ ಮಲಿನಗೊಳ್ಳುತ್ತಿರುವ ಕುರಿತ ಅವರು ಮಾಡಿದ ವಿಶೇಷ ವರದಿಗೆ 2008 ರಲ್ಲಿ ಯುರೋಪಿಯನ್ ಕಮಿಷನ್ ನೀಡುವ ಲೋರೆಂಜೋ ನತಾಲಿ ಜರ್ನಲಿಸಂ ಪ್ರಶಸ್ತಿ ಬಂದಿತ್ತು. ಅದೇ ವರ್ಷ ಅವರು ಭಾರತದಲ್ಲಿ ಪ್ರೆಸ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಅವಾರ್ಡ್ ಕೂಡ ಪಡೆದಿದ್ದರು. 

ಔಟ್ ಲುಕ್ , ತೆಹೆಲ್ಕಾ ನಿಯತಕಾಲಿಕಗಳಿಗೆ ನಿಯಮಿತವಾಗಿ ಬರೆಯುತ್ತಿದ್ದ ರಘು ಅಂತರ್ ರಾಷ್ಟ್ರೀಯ ಟೈಮ್ ಔಟ್ ಮ್ಯಾಗಝಿನ್ ನ ದಿಲ್ಲಿ ಆವೃತ್ತಿಯಲ್ಲಿ ಸಂಪಾದಕರಾಗಿದ್ದರು. 2015 ರಲ್ಲಿ ಪ್ರಾರಂಭವಾದ thewire.in ಸುದ್ದಿತಾಣದ ಸಹಸ್ಥಾಪಕ ಹಾಗು ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಿ ವೈರ್ ನಲ್ಲಿ ರಘು ಕಾರ್ನಾಡ್ ಮಾಡಿರುವ ಹಲವು ತನಿಖಾ ವರದಿಗಳು ಹಾಗು ರಾಜಕೀಯ ವಿಶ್ಲೇಷಣೆಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ. ಮಣಿಪುರದಲ್ಲಿ ನಕಲಿ ಎನಕೌಂಟರ್ ಮೂಲಕ ಅಮಾಯಕರನ್ನು ಕೊಂದ ಪೊಲೀಸ್ ಅಧಿಕಾರಿ ಹೆರೋಜಿತ್ ಕುರಿತ ರಘು ವರದಿ ಅಂತರ್ ರಾಷ್ಟ್ರೀಯ ಚರ್ಚೆಯ ವಿಷಯವಾಗಿತ್ತು. 

ವಿವಿಧ ವಿಷಯಗಳಲ್ಲಿ ಆಗಾಗ ದಿ ಗಾರ್ಡಿಯನ್, ನ್ಯೂಯಾರ್ಕರ್ ನಂತಹ ಖ್ಯಾತ ಅಂತರ್ ರಾಷ್ಟ್ರೀಯ ಮಾಧ್ಯಮಗಳಿಗೂ ಅವರು ಬರೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News