ಭ್ರಷ್ಟಾಚಾರ, ದುರ್ನಡತೆಗಾಗಿ 12 ಆದಾಯ ತೆರಿಗೆ ಅಧಿಕಾರಿಗಳ ವಜಾಗೊಳಿಸಿದ ಕೇಂದ್ರ ಸರಕಾರ

Update: 2019-06-10 17:44 GMT

 ಹೊಸದಿಲ್ಲಿ,ಜೂ.10: ಭ್ರಷ್ಟಾಚಾರ ಮತ್ತು ವೃತ್ತಿಪರ ದುರ್ನಡತೆಗಾಗಿ ಆದಾಯ ತೆರಿಗೆ ಇಲಾಖೆಯ 12 ಹಿರಿಯ ಅಧಿಕಾರಿಗಳನ್ನು ಕೇಂದ್ರ ಸರಕಾರವು ಸೇವೆಯಿಂದ ವಜಾಗೊಳಿಸಿದೆ.

 ವಜಾಗೊಂಡವರ ಪಟ್ಟಿಯಲ್ಲಿ ಜಂಟಿ ಕಮಿಷನರ್ ದರ್ಜೆಯ ಓರ್ವ ಅಧಿಕಾರಿಯಿದ್ದಾರೆ. ಅವರ ವಿರುದ್ಧ ಭ್ರಷ್ಟಾಚಾರ ಮತ್ತು ಸ್ವಯಂಘೋಷಿತ ದೇವಮಾನವ ಚಂದ್ರಾಸ್ವಾಮಿಗೆ ನೆರವಾಗುತ್ತಿದ್ದ ಆರೋಪಿ ಉದ್ಯಮಿಗಳಿಂದ ಹಫ್ತ್ತಾ ವಸೂಲಿಯ ಗಂಭೀರ ಆರೋಪಗಳಿವೆ.

ನೊಯ್ಡದ ಆಯುಕ್ತ(ಮೇಲ್ಮನವಿ)ರ ಹುದ್ದೆಯಲ್ಲಿದ್ದ ಐಆರ್‌ಎಸ್ ಅಧಿಕಾರಿಯೋರ್ವರು ಸಹ ಈ ಪಟ್ಟಿಯಲ್ಲಿದ್ದಾರೆ. ಅವರ ವಿರುದ್ಧ ಆಯುಕ್ತರ ದರ್ಜೆಯ ಇಬ್ಬರು ಮಹಿಳಾ ಐಆರ್‌ಎಸ್ ಅಧಿಕಾರಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳಿವೆ.

ಕಡ್ಡಾಯವಾಗಿ ನಿವೃತ್ತಿಗೊಳಿಸಲಾಗಿರುವ ಇನ್ನೋರ್ವ ಐಆರ್‌ಎಸ್ ಅಧಿಕಾರಿ ತನ್ನ ಮತ್ತು ಕುಟುಂಬ ಸದಸ್ಯರ ಹೆಸರುಗಳಲ್ಲಿ 3.17 ಕೋ.ರೂ.ಗೂ ಅಧಿಕ ವೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ. ಈ ಆಸ್ತಿಗಳನ್ನು ಅವರು ತನ್ನ ಹುದ್ದೆಯ ದುರುಪಯೋಗ ಹಾಗು ಭ್ರಷ್ಟ ಮತ್ತು ಅಕ್ರಮ ಮಾರ್ಗಗಳಿಂದ ಸಂಪಾದಿಸಿದ್ದಾರೆ ಎನ್ನಲಾಗಿದೆ.

ವಜಾಗೊಂಡಿರುವ ಆದಾಯ ತೆರಿಗೆ ಅಧಿಕಾರಿಯೋರ್ವರ ವಿರುದ್ಧ ಸಿಬಿಐ ಅಕ್ರಮ ಸಂಪತ್ತು ಪ್ರಕರಣವನ್ನು ದಾಖಲಿಸಿದ್ದು,ಅವರನ್ನು 2009,ಅಕ್ಟೋಬರ್‌ನಲ್ಲಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ಇನ್ನೋರ್ವ ಅಧಿಕಾರಿ ಭ್ರಷ್ಟಾಚಾರ ಮತ್ತು ಹಫ್ತಾ ವಸೂಲಿ ಪ್ರಕರಣಗಳಲಿ ಭಾಗಿಯಾಗಿದ್ದು,ಹಲವಾರು ತಪ್ಪು ಮತ್ತು ದುರುದ್ದೇಶಪೂರ್ವಕ ತೆರಿಗೆ ನಿಗದಿ ಆದೇಶಗಳನ್ನು ಹೊರಡಿಸಿದ್ದರು. ಈ ಆದೇಶಗಳನ್ನು ಬಳಿಕ ಮೇಲ್ಮನವಿ ಪ್ರಾಧಿಕಾರಗಳು ತಳ್ಳಿಹಾಕಿದ್ದವು.

 ತನ್ನ ಬಲ್ಲ ಆದಾಯ ಮೂಲಗಳ ಶೇ.133.71ರಷ್ಟು ಅಂದರೆ 1.55 ಕೋ.ರೂ.ಗಳ ಅಕ್ರಮ ಆಸ್ತಿಯನ್ನು ಸಂಪಾದಿಸಿದ್ದ ಮತ್ತು ಅಕ್ರಮ ಸಂಪಾದನೆಯ ಹಣದ ವರ್ಗಾವಣೆಗೆ ಹವಾಲಾ ಮಾರ್ಗಗಳನ್ನು ಬಳಸುತ್ತಿದ್ದ ಅಧಿಕಾರಿ ಯೋರ್ವರನ್ನೂ ಕಡ್ಡಾಯವಾಗಿ ನಿವೃತ್ತಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News