ಪತ್ರಕರ್ತ ಪ್ರಶಾಂತ್‌ರನ್ನು ತಕ್ಷಣವೇ ಬಿಡುಗಡೆಗೊಳಿಸಲು ಸುಪ್ರೀಂಕೋರ್ಟ್ ತಾಕೀತು

Update: 2019-06-11 06:41 GMT

ಹೊಸದಿಲ್ಲಿ, ಜೂ.11: ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಕ್ಕೆ ಪತ್ರಕರ್ತ ಪ್ರಶಾಂತ್ ಕನೋಜಿಯಾರನ್ನು ಬಂಧಿಸಿರುವ ಉತ್ತರ ಪ್ರದೇಶ ಪೊಲೀಸರ ಕ್ರಮವನ್ನು ಸುಪ್ರೀಂಕೋರ್ಟ್ ಇಂದು ಪ್ರಶ್ನಿಸಿದೆ. ಕೂಡಲೇ ಪತ್ರಕರ್ತನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶಿಸಿದೆ.

 ಕನೇಜಿಯಾರ ಪತ್ನಿ ಜಗೀಶಾ ಅರೋರ ತನ್ನ ಪತಿ ಪ್ರಶಾಂತ್‌ರನ್ನು ಬಂಧಿಸಿದ್ದನ್ನು ಪ್ರಶ್ನಿಸಿ ಶನಿವಾರ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆಯನ್ನು ಜಸ್ಟಿಸ್ ಇಂದಿರಾ ಬ್ಯಾನರ್ಜಿ ಹಾಗೂ ಅಜಯ್ ರಸ್ತೋಗಿ ಅವರಿದ್ದ ರಜಾಕಾಲದ ಪೀಠ ನಡೆಸಿತು. ಅರೋರ ಪರವಾಗಿ ವಾದಿಸಿದ ನಿತ್ಯಾ ರಾಮಕೃಷ್ಣನ್ ಪತ್ರಕರ್ತನ ಬಂಧನ ಅಕ್ರಮ ಹಾಗು ಅಸಾಂವಿಧಾನಿಕ. ಹೀಗಾಗಿ ಕೂಡಲೇ ಈ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಆಗ್ರಹಿಸಿದ್ದರು.

 ಆದಿತ್ಯನಾಥ್ ವಿರುದ್ಧ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದಕ್ಕೆ ಕಳೆದ ಎರಡು ದಿನಗಳಲ್ಲಿ ಕನೋಜಿಯಾ ಸಹಿತ ಐವರು ಪತ್ರಕರ್ತರನ್ನು ಬಂಧಿಸಲಾಗಿದೆ. ಸ್ವತಂತ್ರ ಪತ್ರಕರ್ತನಾಗಿರುವ ಕನೋಜಿಯಾರನ್ನು ಆದಿತ್ಯನಾಥ್ ಕುರಿತ ಆಕ್ಷೇಪಾರ್ಹ ಪೋಸ್ಟ್‌ಗೆ ಟ್ವೀಟ್ ಮಾಡಿರುವುದಕ್ಕೆ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಆದಿತ್ಯನಾಥ್ ಘನತೆಗೆ ಧಕ್ಕೆ ತರಲಾಗಿದೆ ಆರೋಪಿಸಿ ಪೊಲೀಸ್ ಅಧಿಕಾರಿಯೊಬ್ಬರು ಲಕ್ನೋದಲ್ಲಿ ಕೇಸು ದಾಖಲಿಸಿದ ಬಳಿಕ ದಿಲ್ಲಿಯಲ್ಲಿರುವ ಮನೆಯಿಂದ ಪ್ರಶಾಂತ್‌ರನ್ನು ಬಂಧಿಸಲಾಗಿತ್ತು.

 ‘‘ಏನೇ ಅಭಿಪ್ರಾಯ ಬೇಧವಿದ್ದರೂ ಅವರನ್ನು ಬಂಧಿಸಿದ್ದೇಕೆ?ಅವರನ್ನು ಬಂಧಿಸುವಂತಹ ಕೃತ್ಯ ಎಸಗಿಲ್ಲ. ಕೂಡಲೇ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿ’’ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಆದಿತ್ಯನಾಥ್‌ರ ಕಚೇರಿಯ ಹೊರಗೆ ಮಹಿಳೆಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವಿಡಿಯೋವನ್ನು ಕನೇಜಿಯಾ ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ತಾನು ಆದಿತ್ಯನಾಥ್‌ಗೆ ಮದುವೆಯ ಪ್ರಸ್ತಾವ ಕಳುಹಿಸಿದ್ದೇನೆಂದು ಆ ಮಹಿಳೆ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News