ಅಡಿಕೆ ಮರ ಏರುವ ಮೋಟಾರ್ ಬೈಕ್ ಕಂಡುಹಿಡಿದ ಬಂಟ್ವಾಳದ ರೈತ !

Update: 2019-06-11 07:48 GMT

ಬಂಟ್ವಾಳ, ಜೂ. 10: ತೆಂಗು ಹಾಗೂ ಅಡಿಕೆ ಮರ ಹತ್ತಿ ಕಾಯಿ ಕೀಳುವುದು ಸುಲಭದ ಕೆಲಸವಲ್ಲ, ಅದೊಂದು ಕಲೆಯೇ ಸರಿ. ಕಾಯಿ ಕೀಳಲು ಕಾಲಿಗೆ ಹಗ್ಗ ಕಟ್ಟಿಕೊಂಡು ಮರ ಹತ್ತುವುದು ನಾವು ನೋಡಿದ್ದೇವೆ. ಆದರೆ, ಅಡಿಕೆ ಮರ ಹತ್ತುವ ಅತ್ಯಂತ ಕಠಿಣ ಕೆಲಸವನ್ನು ಸುಯ್ಯೆಂದು ಹತ್ತಲು ಸಾಧ್ಯ ಎಂಬುದನ್ನು ಬಂಟ್ವಾಳದ ರೈತರೊಬ್ಬರು ತೋರಿಸಿಕೊಟ್ಟಿದ್ದಾರೆ.

ಬೈಕ್ ಮಾದರಿಯ ಯಂತ್ರದ ಸಹಾಯದಿಂದ ಮರ ಹತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೈತನ ಕ್ರಿಯಾಶೀಲತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಡಿಕೆ ಮರವನ್ನು ಸರಸರನೆ ಏರುವವರ ಕೊರತೆ ಇರುವ ಈ ಕಾಲದಲ್ಲಿ ಹೈಟೆಕ್ ಯಂತ್ರವೊಂದನ್ನು ಬಂಟ್ವಾಳ ತಾಲೂಕಿನ ಪಣೋಲಿಬೈಲ್ ಸಮೀಪದ ಕೋಮಾಲಿ ಎಂಬಲ್ಲಿರುವ ಪ್ರಗತಿಪರ ಕೃಷಿಕ ಗಣಪತಿ ಭಟ್ ಅವರು ನಿರ್ಮಿಸಿ ಯಶಸ್ವಿಯಾಗಿದ್ದಾರೆ. ಪ್ರಾಯೋಗಿಕವಾಗಿ ತನ್ನ ಮನೆಯ ಸದಸ್ಯರು ಅದರಲ್ಲೂ ಮಹಿಳೆಯರು ಇದನ್ನು ಬಳಸಿದ ಸಂದರ್ಭ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಈಗ ಕೃಷಿಕರ ವಲಯದಲ್ಲಿ ವೈರಲ್ ಆಗಿದೆ.

ದಶಕದ ಹಿಂದೆ ಅಡಕೆ ಮರ ಏರುವುದು ಸಾಮಾನ್ಯ ವಿಷಯವಾದರೂ ಇಂದು ಆ ಕೆಲಸ ಮಾಡಲು ನುರಿತ ವ್ಯಕ್ತಿಗಳು ಲಭ್ಯವಾಗುತ್ತಿಲ್ಲ ಎಂಬುದು ಮಲೆನಾಡ ಕೃಷಿಕರ ಮಾತು. ಮರ ಹತ್ತಲು ಹಲವು ಯಂತ್ರಗಳ ಆವಿಷ್ಕಾರಗಳು ಕಾಲಕಾಲಕ್ಕೆ ನಡೆಯುತ್ತಲೇ ಇವೆ. ಇದಕ್ಕೊಂದು ಸೇರ್ಪಡೆ ಮರ ಹತ್ತುವ ಬೈಕ್. ಇದರ ಮೂಲ ಉದ್ದೇಶವೇ ಯಾರ ಸಹಾಯವೂ ಇಲ್ಲದೆ ಮರ ಹತ್ತುವುದು. ಸದ್ಯಕ್ಕೆ ಅಡಕೆ ಮರ ಹತ್ತಲು ಉಪಯೋಗವಾಗುತ್ತಿರುವ ಈ ಯಂತ್ರವನ್ನು ಪರಿಷ್ಕರಿಸಿ, ತೆಂಗಿನ ಮರ ಹತ್ತುವಂತೆ ಮಾಡುವ ಯೋಜನೆಯೂ ಭಟ್ ಅವರಿಗಿದೆ.

ಬೈಕ್ ಮಾದರಿಯ ಯಂತ್ರ

ಇದು 28 ಕೆ.ಜಿ. ತೂಕವುಳ್ಳ ಪೆಟ್ರೋಲ್ ಚಾಲಿತ 2 ಸ್ಟ್ರೋಕ್ ಇಂಜಿನ್ ಇರುವ ಬೈಕ್ ಮಾದರಿಯ ಯಂತ್ರ. ಇದರಲ್ಲಿ ಹೈಡ್ರಾಲಿಕ್ ಡಿಸ್ಕ್ ಡ್ರಮ್ ಹೊಂದಿದ ಬ್ರೇಕ್ ಕೂಡ ಇದೆ. ಗೇರ್ ಬಾಕ್ಸ್ ಮತ್ತು ಡಬಲ್ ಚೈನ್ ಒಳಗೊಂಡಿರುವ ಯಂತ್ರದಲ್ಲಿ ಪುಟ್ಟ ಸೀಟ್, ಸೇಫ್ಟ್ ಬೆಲ್ಟ್ ವ್ಯವಸ್ಥೆ ಒಳಗೊಂಡಿದೆ. ಸುಮಾರು 70 ಕೆ.ಜಿ. ತೂಕವುಳ್ಳ ವ್ಯಕ್ತಿ ಇದರಲ್ಲಿ ಸಲೀಸಾಗಿ ಕುಳಿತುಕೊಳ್ಳಬಹುದು. ಎರಡೂ ಕೈಯನ್ನು ಹಿಡಿಯಲು ಹ್ಯಾಂಡಲ್, ಬೈಕ್‍ನ ಹ್ಯಾಂಡ್ ಬ್ರೇಕ್ ಮಾದರಿಯಲ್ಲಿ ರುವ ನಿಯಂತ್ರಣ ವ್ಯವಸ್ಥೆ ಇಲ್ಲಿದೆ. ಈ ಬೈಕ್ ನಂಥ ಯಂತ್ರದಲ್ಲಿ ಕುಳಿತು ಸೇಫ್ಟಿ ಬೆಲ್ಟ್ ಕಟ್ಟಿಕೊಂಡು ಸ್ವಿಚ್ ಒತ್ತಿದರೆ ಮುಗೀತು. ಸುಯ್ಯೆಂದು 30 ಸೆಕೆಂಡ್‍ಗಳಲ್ಲಿ ನೀವು ಅಡಕೆ ಮರದ ತುದಿಗೆ  ಕೆಲಸ ಮುಗಿಸಿ ಕೆಳಗಿಳಿಯಬೇಕಾದರೆ ಇಂಜಿನ್ ಆಫ್ ಮಾಡಿದರೂ ನಡೆಯುತ್ತದೆ. ಬೀಳುವ ಯಾವುದೇ ಅಪಾಯವಿಲ್ಲ. ಮರಕ್ಕೂ ತೊಂದರೆ ಇಲ್ಲ ಎಂದು ಮಾಹಿತಿ ನೀಡುತ್ತಾರೆ ಭಟ್ ಅವರು.

ಕಾರ್ಯನಿರ್ವಹಣೆ ಹೇಗೆ ?

ಟೂ ಸ್ಟ್ರೋಕ್ ಇಂಜಿನ್ (ಹಳೇ ಚೇತಕ್ ಸ್ಕೂಟರ್‍ನಲ್ಲಿರುವಂತೆ) ಆಗಿರುವ ಕಾರಣ, ಪೆಟ್ರೋಲ್ ಮತ್ತು ಆಯಿಲ್ ಸೂಚಿನ ಪ್ರಮಾಣದಲ್ಲಿ ಹಾಕಿ ಸುಸ್ಥಿತಿಯಲ್ಲಿ ಯಂತ್ರವನ್ನು ಇಡಬೇಕು. ಬಳಿಕ ತಾವೇರುವ ಅಡಿಕೆ ಮರದ ಬುಡದಲ್ಲಿ ಅದನ್ನು ಸ್ಥಾಪಿಸಬೇಕು. ಇದರ ವಿನ್ಯಾಸ ಹೇಗಿದೆ ಎಂದರೆ ಯಂತ್ರವನ್ನು ಬಿಡಿಸಿ, ಅಡಕೆ ಮರಕ್ಕೆ ತಾಗಿಸಿದರೆ, ಅದನ್ನು ಕಚ್ಚಿಕೊಂಡು ಕುಳಿತುಕೊಳ್ಳುತ್ತದೆ. ಅದಾದ ಬಳಿಕ ನಮ್ಮ ಜಾಗರೂಕತೆಗೆ ಸೇಫ್ಟಿ ಬೆಲ್ಟ್ ಕಟ್ಟಿಕೊಂಡು ಯಂತ್ರದಲ್ಲಿರುವ ಆಸನದಲ್ಲಿ ಕುಳಿತು, ಸ್ವಿಚ್ ಅದುಮಿದರೆ, ಬುರ್ರೆಂದು ಮೇಲಕ್ಕೇರುತ್ತಾ ಹೋಗುತ್ತದೆ. ನಿಮಗೆ ಅರ್ಧ ಜಾಗದಲ್ಲಿಯೇ ನಿಲ್ಲಿಸಬೇಕೆಂದಿದ್ದರೆ, ನಿಲ್ಲಿಸಬಹುದು, ಒಮ್ಮೆ ಕೆಳಕ್ಕೆ ಬಂದು ಮತ್ತೆ ಮೇಲಕ್ಕೆ ಹೋಗಲೂ ಬಹುದು, ಸಾಮಾನ್ಯವಾಗಿ 30 ಸೆಕೆಂಡ್‍ಗಳಲ್ಲಿ ಒಂದು ಅಡಕೆ ಮರವನ್ನು ಹತ್ತಬಹುದು. ತಮ್ಮ ಕೆಲಸವನ್ನು ಮುಗಿಸಿದ ಬಳಿಕ ಯಂತ್ರದ ಬ್ರೇಕ್ ಸಹಾಯದಿಂದ ಹಾಗೆಯೇ ಕೆಳಕ್ಕಿಳಿಯಬಹುದು. ಈ ಸಂದರ್ಭ ಇಂಜಿನ್ ಆಫ್ ಆಗಿದ್ದರೂ ಪರವಾಗಿಲ್ಲ ಎನ್ನುತ್ತಾರೆ ಗಣಪತಿ ಭಟ್. ಡಬಲ್ ಬ್ರೇಕ್, ಸೇಫ್ಟ್ ಬೆಲ್ಟ್ ಇದ್ದರೆ ಮನುಷ್ಯ ಯಾವುದೆಲ್ಲ ಮರವನ್ನು ಹತ್ತುತ್ತಾನೋ ಅಲ್ಲೆಲ್ಲ ಯಂತ್ರ ಕೆಲಸ ಮಾಡುತ್ತದೆ ಎನ್ನುತ್ತಾರೆ ಅವರು.

ಮಹಿಳೆಯರಿಗೂ ಏರಬಹುದು

ಗಣಪತಿ ಭಟ್ ಮಗಳು ಪದವಿ ವ್ಯಾಸಂಗ ಮಾಡುತ್ತಿರುವ ಸುಪ್ರಿಯಾ ಮರವೇರುವ ಯಂತ್ರದಲ್ಲಿ ಕುಳಿತು ಸ್ವಿಚ್ ಅದುಮಿ ಮೇಲಕ್ಕೇರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೃಷಿ ನಡೆಸುವವರು ಸ್ವತಃ ದುಡಿಯುವುದಿದ್ದರೆ ಯಾರ ಸಹಾಯವೂ ಇಲ್ಲದೆ ತಾವೇ ಮರವೇರಬಹುದು. ಮಹಿಳೆಯರು, ಮಕ್ಕಳಿಗೂ ಇದು ಸೇಫ್ ಎನ್ನುವುದು ಪ್ರಾಯೋಗಿಕವಾಗಿ ಸಾಬೀತಾಗಿದೆ ಎಂದು ಭಟ್ ಹೇಳಿದರು.

ಯಂತ್ರಕ್ಕೆ ಬೇಡಿಕೆ ಬಂದಿದೆ

ತನ್ನ ಸ್ವಂತ ಉಪಯೋಗಕ್ಕಾಗಿ ಮಾಡಿದ ಈ ಪ್ರಯೋಗದ ವಿಡಿಯೋ ವ್ಯಾಪಕವಾಗಿ ಪ್ರಚಾರಗೊಂಡ ಕಾರಣ ಭಟ್ ಅವರಿಗೆ ದೂರವಾಣಿ ಕರೆಗಳ ಸುರಿಮಳೆಯೇ ಬರುತ್ತಿದೆ. ಅದನ್ನು ನೋಡಲು ದೂರದೂರುಗಳಿಂದ ಕೃಷಿಕರು ಬರುತ್ತಿದ್ದಾರೆ. ಜೊತೆಗೆ ತನಗೊಂದು ಯಂತ್ರ ನಿರ್ಮಿಸಿಕೊಡಿ ಎಂಬ ಬೇಡಿಕೆಯೂ ಬರುತ್ತಿದೆ. ಯಂತ್ರ ನಿರ್ಮಿಸಲು ಎಪ್ಪತ್ತೈದು ಸಾವಿರ ರೂ. ಬೇಕು, ಬೇಡಿಕೆ ಇಟ್ಟವರಿಗೆ ಮಾಡಿ ಕೊಡುತ್ತೇನೆ ನನ್ನ ಮೂಲ ಉದ್ದೇಶ ಕೃಷಿಕರು ಕಾರ್ಮಿಕರಿಲ್ಲ ಎಂದು ಕಸುಬು ಬಿಡದೆ, ಮುನ್ನಡೆಯಲು ಸಹಕಾರಿಯಾಗಬೇಕು ಎನ್ನುವ ಗಣಪತಿ ಭಟ್, ತನ್ನ ಕೃಷಿ ಕಾರ್ಯದ ಜೊತೆ ಯಂತ್ರ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ.

Writer - ಅಬ್ದುಲ್ ರಹಿಮಾನ್ , ತಲಪಾಡಿ

contributor

Editor - ಅಬ್ದುಲ್ ರಹಿಮಾನ್ , ತಲಪಾಡಿ

contributor

Similar News