ಮುಂಬೈ ಕಾರಾಗೃಹದಲ್ಲಿ ನೀರವ್ ಮೋದಿಗೆ ಅತ್ಯುನ್ನತ ಭದ್ರತೆಯ ಕೊಠಡಿ ಸಿದ್ಧ!

Update: 2019-06-11 16:55 GMT

ಮುಂಬೈ, ಜೂ.11: ಬಹುಕೋಟಿ ಬ್ಯಾಂಕ್ ವಂಚನೆ ಆರೋಪಿ ನೀರವ್ ಮೋದಿಯನ್ನು ಬ್ರಿಟನ್‌ನಿಂದ ಭಾರತಕ್ಕೆ ಗಡಿಪಾರು ಮಾಡಿದ ಸಂದರ್ಭದಲ್ಲಿ ಅವರನ್ನು ಕೂಡಿ ಹಾಕಲು ಮುಂಬೈಯ ಆರ್ಥರ್ ರಸ್ತೆಯ ಜೈಲಿನಲ್ಲಿ ಅತ್ಯುನ್ನತ ಭದ್ರತೆಯನ್ನು ಹೊಂದಿರುವ ಕೊಠಡಿಯನ್ನು ಸಿದ್ಧಪಡಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ನೀರವ್ ಮೋದಿಯನ್ನು ಗಡಿಪಾರು ಮಾಡಿದರೆ ಅವರನ್ನು ಜೈಲಿನ ಕೊಠಡಿಯಲ್ಲಿ ಇರಿಸಬೇಕಾದ ಅಗತ್ಯ ಬಿದ್ದರೆ ಅದಕ್ಕಾಗಿ ಆರ್ಥರ್ ರಸ್ತೆಯ ಜೈಲಿನಲ್ಲಿ ಏನೆಲ್ಲ ಸೌಲಭ್ಯಗಳನ್ನು ಒದಗಿಸಬಹುದು ಎನ್ನುವ ಮಾಹಿತಿಯನ್ನು ಜೈಲಿನ ಅಧಿಕಾರಿಗಳು ಕಳೆದ ವಾರ ಗೃಹ ಇಲಾಖೆಗೆ ನೀಡಿದ್ದರು. ನೀರವ್ ಮೋದಿಯನ್ನು ಭಾರತಕ್ಕೆ ಮರಳಿಸಿದರೆ ಅವರನ್ನು ಜೈಲಿನ ಬಾರಕ್ ಸಂಖ್ಯೆ 12ರಲ್ಲಿರುವ ಎರಡು ಕೋಣೆಗಳ ಪೈಕಿ ಒಂದರಲ್ಲಿ ಇಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ನೀರವ್ ಮೋದಿ ಸದ್ಯ ಇಂಗ್ಲೆಂಡ್‌ನ ಅತ್ಯಂತ ಕಿಕ್ಕಿರಿದ ಕಾರಾಗೃಹಗಳಲ್ಲಿ ಒಂದಾಗಿರುವ ಹರ್ ಮೆಜೆಸ್ಟೀಸ್ ಪ್ರಿಸನ್‌ನಲ್ಲಿ ಬಂಧಿಯಾಗಿದ್ದಾರೆ. ಜಾಮೀನು ಕೋರಿ ಮೋದಿ ಹಾಕಿರುವ ಮನವಿಯನ್ನು ಕಳೆದ ತಿಂಗಳು ಬ್ರಿಟನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಳ್ಳಿಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News