ಗೋವಿಂದ ಪನ್ಸಾರೆ ಹತ್ಯೆ ಪ್ರಕರಣ: ಸಂಘಪರಿವಾರ ಕಾರ್ಯಕರ್ತ ಕಲಸ್ಕರ್ ಬಂಧನ

Update: 2019-06-11 18:18 GMT

ಮುಂಬೈ, ಜೂ.11: ಹಿರಿಯ ಕಮ್ಯುನಿಸ್ಟ್ ನಾಯಕ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಸಂಘಪರಿವಾರ ಕಾರ್ಯಕರ್ತ ಶರದ್ ಕಲಸ್ಕರ್‌ನನ್ನು ಮಂಗಳವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಐಡಿಯ ವಿಶೇಷ ತನಿಖಾ ತಂಡ ಕಲಸ್ಕರ್‌ನನ್ನು ಮುಂಬೈಯಲ್ಲಿ ಬಂಧಿಸಿದ್ದು ಕೋಲಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಆತನನ್ನು ಜೂನ್ 18ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನೇಕ ಪ್ರತಿಷ್ಠಿತ ವ್ಯಕ್ತಿಗಳ ಹತ್ಯೆ ಪ್ರಕರಣಗಳಲ್ಲಿ ಕಲಸ್ಕರ್ ಹೆಸರು ಕೇಳಿಬಂದಿದ್ದು ಪಾಲ್ಗರ್ ಶಸ್ತ್ರಾಸ್ತ್ರ ಅಕ್ರಮ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಆಗಸ್ಟ್‌ನಲ್ಲಿ ಮಹಾರಾಷ್ಟ್ರ ಎಟಿಎಸ್ ಆತನನ್ನು ಬಂಧಿಸಿತ್ತು. ಸಿಬಿಐ ಪ್ರಕಾರ, ಪ್ರಗತಿಪರ ಚಿಂತಕ ನರೇಂದ್ರ ದಾಬೋಲ್ಕರ್ ಅವರತ್ತ ಗುಂಡು ಹಾರಿಸಿದ್ದ ಇಬ್ಬರು ಆರೋಪಿಗಳ ಪೈಕಿ ಕಲಸ್ಕರ್ ಓರ್ವನಾಗಿದ್ದ. ಕಲಸ್ಕರ್ ಹೆಸರು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲೂ ಕೇಳಿಬಂದಿತ್ತು.

ಕಲಸ್ಕರ್, ಗೌರಿ ಪ್ರಕರಣದಲ್ಲೂ ಪ್ರಮುಖ ಪಾತ್ರ ನಿಭಾಯಿಸಿದ್ದ ಎಂಬ ಬಗ್ಗೆ ತನಿಖೆಯ ವೇಳೆ ಸಾಕ್ಷಿ ಲಭ್ಯವಾಗಿದ್ದು ಆತನನ್ನು ಪ್ರಕರಣದ 16ನೇ ಆರೋಪಿಯಾಗಿ ಸೇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News