ರಕ್ಷಣಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆರಂಭಕ್ಕೆ ನಿರ್ಧಾರ

Update: 2019-06-11 17:59 GMT

ಹೊಸದಿಲ್ಲಿ, ಜೂ.11: ಬಾಹ್ಯಾಕಾಶದಲ್ಲಿ ನಡೆಯುವ ಯುದ್ಧದಲ್ಲಿ ಸಶಸ್ತ್ರ ಪಡೆಗಳ ಸಾಮರ್ಥ್ಯ ವೃದ್ಧಿಯ ಉದ್ದೇಶದಿಂದ ಅತ್ಯಾಧುನಿಕ ಶಸ್ತ್ರ ವ್ಯವಸ್ಥೆ ಹಾಗೂ ತಂತ್ರಜ್ಞಾನ ಅಭಿವೃದ್ಧಿಗಾಗಿ ನೂತನ ಸಂಸ್ಥೆಯೊಂದನ್ನು ಆರಂಭಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

ರಕ್ಷಣಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಡಿಎಸ್‌ಆರ್‌ಒ) ಎಂಬ ಹೆಸರಿನ ನೂತನ ಸಂಸ್ಥೆಯನ್ನು ಆರಂಭಿಸಲು ಪ್ರಧಾನಿ ಮೋದಿ ನೇತೃತ್ವದ ಭದ್ರತೆ ಸಂಪುಟ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಯುದ್ಧದ ಶಸ್ತ್ರ ವ್ಯವಸ್ಥೆ ಮತ್ತು ತಂತ್ರಜ್ಞಾನ ಸಿದ್ಧಪಡಿಸುವ ಕಾರ್ಯವನ್ನು ನೂತನ ಸಮಿತಿ ನಿರ್ವಹಿಸಲಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದೆಯೇ ಸರಕಾರದ ಉನ್ನತ ಮಟ್ಟದಲ್ಲಿ ಈ ಕುರಿತ ನಿರ್ಧಾರ ಕೈಗೊಳ್ಳಲಾಗಿದ್ದು ಜಂಟಿ ಕಾರ್ಯದರ್ಶಿ ಮಟ್ಟದ ವಿಜ್ಞಾನಿಯ ಉಸ್ತುವಾರಿಯಲ್ಲಿ ಸಂಸ್ಥೆಯ ರೂಪುರೇಷೆ ಸಿದ್ಧಗೊಳ್ಳುತ್ತಿದೆ. ಈ ಸಂಸ್ಥೆಯಲ್ಲಿ ವಿಜ್ಞಾನಿಗಳ ತಂಡವೊಂದಿದ್ದು ಇವರು ಮೂರೂ ರಕ್ಷಣಾ ಪಡೆಗಳ ಸಿಬ್ಬಂದಿ ಅಧಿಕಾರಿಗಳೊಂದಿಗೆ ನಿಕಟ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಲಿದ್ದಾರೆ.

ರಕ್ಷಣಾ ಬಾಹ್ಯಾಕಾಶ ಸಂಸ್ಥೆಗೆ(ಡಿಎಸ್‌ಎ) ಅಭಿವೃದ್ಧಿ ಮತ್ತು ಸಂಶೋಧನಾ ನೆರವನ್ನು ನೂತನ ಸಂಸ್ಥೆ ಒದಗಿಸಲಿದೆ. ಈ ವರ್ಷದ ಮಾರ್ಚ್‌ನಲ್ಲಿ ಭಾರತವು ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಅಂತರಿಕ್ಷದಲ್ಲಿರುವ ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿದೆ ಮತ್ತು ಈ ಮೂಲಕ ಇಂತಹ ಸಾಮರ್ಥ್ಯ ಹೊಂದಿರುವ ವಿಶ್ವದ ನಾಲ್ಕು ರಾಷ್ಟ್ರಗಳ ವಿಶಿಷ್ಟ ಕೂಟಕ್ಕೆ ಭಾರತವೂ ಸೇರ್ಪಡೆಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News