ಗ್ರಾಮಕರಣಿಕರು ಗ್ರಾಮೀಣ ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕು-ಐವನ್ ಡಿ'ಸೋಜ

Update: 2019-06-11 18:00 GMT

ಪುತ್ತೂರು: ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳು ಗ್ರಾಮಕರಣಿಕರ ಮೂಲಕವೇ ಸರಕಾರದ ಗಮನಕ್ಕೆ ಬರಬೇಕಾಗಿದೆ. ಹಾಗಾಗಿ ಗ್ರಾಮೀಣ ಜನರ ಸಮಸ್ಯೆಗಳಿಗೆ ಗ್ರಾಮಕರಣಿಕರು ಧ್ವನಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಮುಖ್ಯ ಮಂತ್ರಿಗಳ ಸಂಸದೀಯ ಸಂಸದೀಯ ಕಾರ್ಯದರ್ಶಿ(ಕಂದಾಯ) ಐವನ್ ಡಿ'ಸೋಜ ಹೇಳಿದರು

ಅವರು ಮಂಗಳವಾರ ಪುತ್ತೂರು ಮಿನಿ ವಿಧಾನ ಸೌಧದಲ್ಲಿರುವ ಸಹಾಯಕ ಆಯುಕ್ತ ಸಭಾಂಗಣದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ನಡೆದ ಸಾರ್ವಜನಿಕರ ಕುಂದುಕೊರತೆಗಳ ಸಭೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಗ್ರಾಮಕರಣಿಕರಿಗೆ ಬಹಳಷ್ಟು ಜವಾಬ್ದಾರಿಯಿದೆ. ಸರಕಾರ ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಗೂ ದೊರೆಯುವಂತೆ ಮಾಡುವುದು ಮಾತ್ರವಲ್ಲದೆ ಸರಕಾರದಿಂದ ದೊರೆಯಬೇಕಾದ ಪಿಂಚನಿಗಳು ಕೆಲವೊಂದು ಭಾರಿ ವಿಳಂಬವಾದಾಗ ಜನರ ಮನವೊಳಿಸುವ ಕೆಲಸ ಮಾಡುವುದು ಬಹಳ ಮುಖ್ಯವಾಗಿದೆ ಎಂದರು.

ಸರಕಾರ ಜಾರಿಗೆ ತರುವ ಯೋಜನೆಗಳು ಕಟ್ಟ ಕಡೆಯ ವ್ಯಕ್ತಿಗೆ ತಲುಪುವಲ್ಲಿ ಕಂದಾಯ ಇಲಾಖೆಯ ಪಾತ್ರ ಮಹತ್ವದ್ದು. ಸರಕಾರಕ್ಕೆ ಬರುವ ಒಳ್ಳೆಯ ಹಾಗೂ ಕೆಟ್ಟ ಹೆಸರಿನಲ್ಲಿ ನೀವೂ ಭಾಜನರು. ಈ ನಿಟ್ಟಿನಲ್ಲಿ ಗ್ರಾಮಕರಣಿಕರು, ಕಂದಾಯ ನಿರೀಕ್ಷಕರು ಸೇರಿದಂತೆ ಪ್ರತಿಯೊಬ್ಬ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು. 

ಪಿಂಚನಿ ಅದಾಲತ್ ಹಾಗೂ ಕಂದಾಯ ಅದಾಲತ್ ನಡೆಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳುವುದು, ಅತೀ ಆವಶ್ಯಕವಾದ ಪಡಿತರ ಚೀಟಿ ಶೀಘ್ರ ವಿತರಿಸುವುದು, 94ಸಿ ಹಾಗೂ 94ಸಿಸಿ ಹಕ್ಕುಪತ್ರ ವಿತರಣೆ ಮೊದಲಾದ ಕಂದಾಯ ಇಲಾಖೆಯ ಕಾರ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪುತ್ತೂರು ತಾಲೂಕಿನಲ್ಲಿ ಉಪವಿಭಾಗಾಧಿಕಾರಿ, ತಹಶೀಲ್ದಾರ್, ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮಕರಣಿಕರು ಸೇರಿದಂತೆ ಅಧಿಕಾರಿಗಳು ಉತ್ತಮ ತಂಡವಿದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು ಇಲ್ಲಿನ ಅಧಿಕಾರಿಗಳ ತಂಡ ಅಭಿನಂದನಾರ್ಹರು. ಇಲ್ಲಿನ ತಂಡದ ಕೆಲಸ ಕಾರ್ಯಗಳ ಬಗ್ಗೆ ನಾನು ಜಿಲ್ಲಾಧಿಕಾರಿ ಹಾಗೂ ಮುಖ್ಯ ಮಂತ್ರಿಗಳ ಸಭೆಯಲ್ಲಿಯೂ ಉಲ್ಲೇಖ ಮಾಡುತ್ತಿದ್ದೇನೆ ಎಂದರು. 

ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿದಂತೆ ತುರ್ತು ಕ್ರಮಕೈಗೊಳ್ಳುವುದು ಹಾಗೂ ಶೀಘ್ರವಾಗಿ ಮಾಹಿತಿ ನೀಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಆ್ಯಪ್ ಮಾಡಿದ್ದಾರೆ. ಅದರಂತೆ ಪುತ್ತೂರಿನಲ್ಲಿಯೂ ಮೊಬೈಲ್ ಆ್ಯಪ್ ರಚಿಸಿ ಅದರ ಮಳೆಗಾಲದಲ್ಲಿ ಉಂಟಾಗಬಹುದಾದ ವಿಕೋಪಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಶೀಘ್ರವಾಗಿ ತಲುಪಿಸುವುದು ಹಾಗೂ ತುರ್ತು ಪರಿಹಾರ ಕ್ರಮಕೈಗೊಳ್ಳುವುದು ಸಾಧ್ಯ. ಇದರಿಂದಾಗಿ ಜನರು ಕಛೇರಿಗೆ ಅಲೆದಾಡುವುದನ್ನು ತಪ್ಪಿಸಬಹುದು ಎಂದು ಐವನ್ ಡಿ'ಸೋಜ ಸಲಹೆ ನೀಡಿದರು.

ಕಂದಾಯ ಇಲಾಖೆಯ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವಲ್ಲಿ ಗ್ರಾಮಕರಣಿಕರ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಇತರ ಅಧಿಕಾರಿಗಳಂತೆ ಗ್ರಾಮಕರಣಿಕರಿಗೂ ಪ್ರಯಾಣ ಭತ್ತೆ, ಹಾಗೂ ಮೊಬೈಲ್ ಸಿಮ್ ಸರಕಾರದ ವತಿಯಿಂದ ಒದಗಿಸುವಂತೆ ಸಹಾಯಕ ಆಯುಕ್ತ ಕೃಷ್ಣ ಮೂರ್ತಿ ಎಚ್.ಕೆ ಮನವಿ ಮಾಡಿದರು. ಕೆಲವು ಗ್ರಾಮಗಳಲ್ಲಿ ಗ್ರಾಮಕರಣಿಕರಿಗೆ ಸರಿಯಾದ ಕಛೇರಿ ಕಟ್ಟಡಗಳೇ ಇಲ್ಲ. ಮೂಲಭೂತ ಸೌಲಭ್ಯಗಳೂ ಇಲ್ಲ ಎಂದು ಸಂಸದೀಯ ಕಾರ್ಯದರ್ಶಿಯವರ ಗಮನಕ್ಕೆ ತಂದರು.

ಕಳೆದ ಬಾರಿ ಅಡಿಕೆ ತೋಟಗಳಿಗೆ ಬಾಧಿಸಿದ ಕೊಳೆರೋಗದ ಪರಿಹಾರಕ್ಕಾಗಿ ರೈತರು ಅರ್ಜಿ ಹಾಕಿದ್ದು ತಾಲೂಕಿನಲ್ಲಿ ಕೇವಲ ಶೇ.10ಮಂದಿ ರೈತರಿಗೆ ಮಾತ್ರ ಇದರ ಪ್ರಯೋಜನ ಪಡೆದಿದ್ದಾರೆ. ಶೇ.90ರಷ್ಟು ಮಂದಿ ರೈತರಿಗೆ ಇನ್ನೂ ಇದರ ಪ್ರಯೋಜನ ದೊರೆತಿಲ್ಲ. ಕಂದಾಯ ಇಲಾಖೆಯಲ್ಲಿ ವಿಚಾರಿಸಿದರೆ ಸ್ಪಷ್ಟ ಉತ್ತರ ದೊರೆಯುತ್ತಿಲ್ಲ ಎಂದು ಕಾವು ಹೇಮನಾಥ ಶೆಟ್ಟಿಯವರು ಆರೋಪಿಸಿದರು. ಕೊಳೆರೋಗ ಪರಿಹಾರ ನೇರವಾಗಿ ರೈತರ ಖಾತೆಗೆ ಜಮೆ ಆಗುತ್ತಿದೆ. ಇದರ ಬಗ್ಗೆ ತಾಲೂಕಿಗೆ ಯಾವುದೇ ಮಾಹಿರಿಗಳು ದೊರೆಯುವುದಿಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ಮಾಹಿತಿ ಸಂಗ್ರಹಿಸಿ ತಿಳಿಸುವುದಾಗಿ ಸಹಾಯಕ ಆಯುಕ್ತ ಕೃಷ್ಣಮೂರ್ತಿ ತಿಳಿಸಿದರು. 

ಅಕ್ರಮ ಸಕ್ರಮ ಯೋಜನೆಯ ಫಾರಂ50ಹಾಗೂ 53ರಲ್ಲಿ ಮಂಜೂರಾದ ಜಾಗವನ್ನು 15 ವರ್ಷದ ಬಳಿಕ ಆವಶ್ಯಕತೆಗೆ ಅನುಗುಣವಾಗಿ ಮಾರಾಟ ಮಾಡಲು ಹಿಂದೆ ಜಿಲ್ಲಾಧಿಕಾರಿಗಳಿಗೆ ನಿರಾಕ್ಷೇಪನಾ ಪತ್ರ ನೀಡಲು ಅವಕಾಶವಿತ್ತು. ಆದರೆ ಈಗ ಸರಕಾರದ ಮಟ್ಟದಲ್ಲಿ ನಡೆಯುತ್ತಿದ್ದು ರೈತರು ಸಮಸ್ಯೆ ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಹಿಂದಿನಂತೆ ಜಿಲ್ಲಾಧಿಕಾರಿಗಳು ನಿರಾಕ್ಷೇಪನೆ ನೀಡಿ ಕ್ರಯ ಚೀಟಿ ಹಾಗೂ ವಿಭಾಗ ಪತ್ರ ಮಾಡಿಕೊಳ್ಳುವಂತೆ ಅವಕಾಶ ನೀಡಬೇಕು ಹಾಗೂ ಪೋಡಿ ಮುಕ್ತ ಗ್ರಾಮದಲ್ಲಿ ಏಕ ವ್ಯಕ್ತಿ ಪ್ಲಾಟಿಂಗ್‍ಗೆ ಅವಕಾಶ ನೀಡುವಂತೆ ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್ ಮನವಿ ಮಾಡಿದರು.

ಜಿ.ಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಸದಸ್ಯ ಸರ್ವೋತ್ತಮ ಗೌಡ, ತಾ.ಪಂ ಸದಸ್ಯೆ ಕೆ.ಟ ವಲ್ಸಮ್ಮ, ನಗರ ಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಉಪತಹಶೀಲ್ದಾರರು, ಕಂದಾಯ ನಿರೀಕ್ಷಕರು ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News