ಕಥುವಾ ಪ್ರಕರಣದ ತೀರ್ಪಿಗೆ ಪಾಪ್ಯುಲರ್ ಫ್ರಂಟ್ ಸ್ವಾಗತ

Update: 2019-06-12 06:29 GMT

ಮಂಗಳೂರು, ಜೂ.12: ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಮಂದಿರವೊಂದರಲ್ಲಿ ಬಾಲಕಿಯನ್ನು ಹಲವು ದಿನಗಳ ಕಾಲ ಕೂಡಿಟ್ಟು ಅತ್ಯಾಚಾರ, ಚಿತ್ರಹಿಂಸೆ ಮತ್ತು ಬರ್ಬರವಾಗಿ ಹತ್ಯೆಗೈದ ಪ್ರಕರಣದ ವಿಚಾರಣೆ ನಡೆಸಿದ ಪಠಾಣ್ ಕೋಟ್ ತ್ವರಿತ ನ್ಯಾಯಾಲಯದ ತೀರ್ಪನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಇ.ಅಬೂಬಕರ್ ಸ್ವಾಗತಿಸಿದ್ದಾರೆ.

ನ್ಯಾಯಾಲಯವು 7 ಮಂದಿ ಆರೋಪಿಗಳ ಪೈಕಿ 6 ಮಂದಿಯನ್ನು ದೋಷಿಗಳೆಂದು ಪರಿಗಣಿಸಿದ್ದು, ಮೂವರು ಆರೋಪಿಗಳಿಗೆ ಜೀವಾವಧಿ ಮತ್ತು ಆರೋಪಿಗಳಿಗೆ ಸಹಕರಿಸಿದ ಮೂವರು ಪೊಲೀಸ್ ಅಧಿಕಾರಿಗಳಿಗೆ 5 ವರ್ಷಗಳ ಸಜೆ ವಿಧಿಸಿ ತೀರ್ಪು ನೀಡಿದೆ. ಇದು ನ್ಯಾಯಕ್ಕಾಗಿ ಹೋರಾಟ ನಡೆಸಿದ ಸಂತ್ರಸ್ತೆಯ ಕುಟುಂಬ, ವಕೀಲರು, ವೈಯಕ್ತಿಕವಾಗಿ ಮತ್ತು ತಂಡವಾಗಿ ಸಹಕಾರ ನೀಡಿದವರು ಮತ್ತು ದೇಶಾದ್ಯಂತ ನ್ಯಾಯಕ್ಕಾಗಿ ಧ್ವನಿಯೆತ್ತಿದ ಜನರ ಸಂಘಟಿತ ಹೋರಾಟಕ್ಕೆ ಸಂದ ಜಯವಾಗಿದೆ.

ಕಥುವಾ ಪ್ರಕರಣವು ಕೇವಲ ಬರ್ಬರತೆಯ ಕಾರಣಕ್ಕಾಗಿ ಮಾತ್ರವಲ್ಲದೆ, ಕೃತ್ಯದ ಹಿಂದಿರುವ ಜನಾಂಗೀಯ ದ್ವೇಷವು ದೇಶಾದ್ಯಂತ ಭಾರೀ ಸುದ್ದಿ ಮಾಡಿತ್ತು. ಆರೋಪಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದರ ವಿರುದ್ಧ ಭಾರೀ ಪ್ರತಿರೋಧ ಮತ್ತು ಬಹಿರಂಗವಾಗಿ ಪ್ರತಿಭಟನೆಯನ್ನೂ ನಡೆಸಿದ್ದು ದೇಶವನ್ನು ಆಘಾತಗೊಳಿಸಿತ್ತು. ಕ್ರೈಮ್ ಬ್ರಾಂಚ್ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸುವುದಕ್ಕೆ ಕಥುವಾದ ವಕೀಲರು ತಡೆಯನ್ನು ಒಡ್ಡಿದ್ದರು. ಹೀಗಾಗಿ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಹೊರರಾಜ್ಯಕ್ಕೆ ಹಸ್ತಾಂತರಿಸಿತ್ತು. ಆದ್ದರಿಂದ ನ್ಯಾಯದ ಹೋರಾಟದಲ್ಲಿ ಈಗ ಸಿಕ್ಕಿರುವ ಗೆಲುವು ಎಲ್ಲ ನ್ಯಾಯಪ್ರಿಯ ಜನರಿಗೆ ಸಾಂತ್ವನ ನೀಡಿದೆ. ಇದೇ ವೇಳೆ ನ್ಯಾಯವನ್ನು ನಾಶಪಡಿಸುವ ಪ್ರಯತ್ನಗಳು ಇನ್ನೂ ನಡೆಯುವ ಸಾಧ್ಯತೆಯಿದ್ದು, ಮತ್ತೆ ಅದನ್ನು ಉಳಿಸಿಕೊಳ್ಳಲು ಇನ್ನಷ್ಟು ತೀವ್ರ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News