ದ.ಕ.ದಲ್ಲಿ 233 ಬಾಲಾಪರಾಧ ಪ್ರಕರಣಗಳು ಪತ್ತೆ: ನ್ಯಾ. ಸತ್ಯನಾರಾಯಣಾಚಾರ್

Update: 2019-06-12 08:04 GMT

ಮಂಗಳೂರು, ಜೂ.12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 233 ಬಾಲಪರಾಧ ಪ್ರಕರಣಗಳು ಪತ್ತೆಯಾಗಿದ್ದರೂ ಅವುಗಳಲ್ಲಿ 150 ಮಾತ್ರ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ ಸತ್ಯನಾರಾಯಣಾಚಾರ್ ತಿಳಿಸಿದ್ದಾರೆ.

ನಗರದ ಪುರಭವನದಲ್ಲಿ ಇಂದು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬಾಲ ಕಾರ್ಮಿಕ ಪದ್ಧತಿಯನ್ನು ಸಾಮಾಜಿಕ ಪಿಡುಗು ಎಂದು ಹೇಳುತ್ತೇವೆ. ಆದರೆ ನಾವೂ ಸಮಾಜದ ಭಾಗವಾದ ಕಾರಣ ನಾವೂ ಅದಕ್ಕೆ ಬಾಧ್ಯಸ್ಥರು. ಹಾಗಾಗಿ ಈ ಆಚರಣೆ ನಮ್ಮನ್ನು ನಾವು ದೂಷಿಸಿಕೊಳ್ಳುವುದಾಗಿದೆ ಎಂದು ಅವರು ಹೇಳಿದರು.

ಒಂದು ಮಗು ಬಾಲ ಕಾರ್ಮಿಕನಾಗುವಲ್ಲಿ ಸಾಕಷ್ಟು ಕಾರಣಗಳಿರುತ್ತವೆ. ಇದು ಯಾರ ತಪ್ಪು ಎಂದು ವಿಶ್ಲೇಷಿಸುವುದು, ತೀರ್ಮಾನಿಸುವುದು ಕಷ್ಟಕರ. ಪೋಷಕರು ಮಕ್ಕಳನ್ನು ಶಾಲೆಯಿಂದ ಬಿಡಿಸಿ ಕೆಲಸಕ್ಕೆ ಕಳುಹಿಸುವುದರ ಹಿಂದೆ ಸಾಕಷ್ಟು ಕಾರಣವಿರುತ್ತದೆ. ಈ ಬಗ್ಗೆ ನಾವು ಗಂಭೀರವಾಗಿ ಚಿಂತನೆ ನಡೆಸುವುದರ ಜತೆಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ಮುಖ್ಯಸ್ಥ ಡಾ.ಹಿಲ್ಡಾ ರಾಯಪ್ಪನ್ ಮಾತನಾಡಿ, ಬಾಲ ಕಾರ್ಮಿಕರಾಗಿ ಪತ್ತೆಯಾಗುವ, ಅನಾಥ, ಭಿಕ್ಷಾಟನೆಯಲ್ಲಿ ತೊಡಗಿಕೊಂಡಿರುವ ಮಕ್ಕಳಿಗೆ ಪಾಲನಾ ಕೇಂದ್ರವಾಗಿ ಪ್ರಜ್ಞಾ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಸಂಸ್ಥೆಯಿಂದ 22 ಮಕ್ಕಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿಸಲಾಗಿದೆ ಎಂದರು.

ಭಿಕ್ಷಾಟನೆಯಿಂದ ರಕ್ಷಿಸಲಾದ ಬಾಲಕಿಯೊಬ್ಬಳಿಗೆ ಪ್ರಜ್ಞಾ ರಕ್ಷಣೆ ನೀಡಿ ಸಲಹಿದ ಪರಿಣಾಮವಾಗಿ ಇಂದು ಆಕೆ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮುಗಿಸಿ, ತಿಂಗಳಿಗೆ 50,000 ರೂ. ಸಂಪಾದಿಸುವ ಸ್ವಾವಲಂಬಿ ಯುವತಿಯಾಗಿ ರೂಪುಗೊಂಡು ತನ್ನಂತಹ ಇತರ ಬಾಲ ಕಾರ್ಮಿಕ ಮಕ್ಕಳಿಗೆ ಆದರ್ಶಪ್ರಾಯಳಾಗಿದ್ದಾಳೆ ಎಂದು ಅವರು ಸಂತಸ ಹಂಚಿಕೊಂಡರು.

ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜ ಮಾತನಾಡಿ, ನಗರದಲ್ಲಿ ಭಿಕ್ಷಾಟನೆಯಲ್ಲಿ ಮಕ್ಕಳು ತೊಡಗಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಇದು ಮುಂದೆ ಬಾಲ ಕಾರ್ಮಿಕ ವ್ಯವಸ್ಥೆಗೆ ಪೂರಕವಾಗಿರುವುದರಿಂದ ಇದನ್ನು ತಡೆಯಲು ಪ್ರಾಯೋಗಿಕವಾಗಿ ವಿಶೇಷ ಯೋಜನೆ ರೂಪಿಸಬೇಕಾಗಿದೆ ಎಂದರು.

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ. ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಎಂದು ಹೇಳಬಹುದಾದರೂ ಘೋಷಣೆ ಮಾಡಲು ಸಾಧ್ಯವಿಲ್ಲ. 18 ವರ್ಷದವರೆಗಿನವರೂ ಮಕ್ಕಳೆಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ 14ರಿಂದ 18 ವರ್ಷಗಳಾದರೂ ಅಪಾಯಕಾರಿ ಉದ್ದಿಮೆಗಳಿಂದ ಹೊರಬಂದಿರುವುದನ್ನು ಖಾತರಿಪಡಿಸುವುದು ಅತ್ಯಗತ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಚಿಣ್ಣರ ತಂಗುಧಾಮ, ಇಂಚರ ಫೌಂಡೇಶನ್ ಮೊದಲಾದ ಸಂಸ್ಥೆಗಳ ಮಕ್ಕಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ಬಲ್ಲಾಳ್, ಮನಪಾ ಆಯುಕ್ತ ಬಿ.ಎಚ್.ನಾರಣಪ್ಪ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಜಿ. ಗಂಗಾಧರ್ ಮೊದಲಾದವರು ಉಪಸ್ಥಿತರಿದ್ದರು.


‘ನಮ್ಮವರು’ ಪರಿಭಾಷೆ ಬದಲಾಗಬೇಕಿದೆ!

ಬಾಲಪರಾಧಗಳ ಕುರಿತಂತೆ ಮಾತನಾಡುವ ಸಂದರ್ಭ ನ್ಯಾಯಾಧೀಶ ಸತ್ಯನಾರಾಯಣಾಚಾರ್, ನಮ್ಮಲ್ಲಿ ಸಾಕಷ್ಟು ಕಾನೂನುಗಳಿದ್ದರೂ ಅನುಷ್ಠಾನದ ವೇಳೆ ಸಾಕಷ್ಟು ಅಡ್ಡಿ ಆತಂಕಗಳು ಎದುರಾಗುತ್ತವೆ. ‘ನಮ್ಮವರು’ ಎಂಬ ಪರಿಭಾಷೆಯಿಂದಾಗಿ ಅನುಷ್ಠಾನದ ವೇಳೆ ಕಾನೂನಿನ ಕುಣಿಕೆಯಿಂದ ತಪ್ಪಿಸಲು ಪ್ರಯತ್ನಿಸಲಾಗುತ್ತದೆ. ಇದರಿಂದಾಗಿ ಹಲವು ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಬಂದರೂ ನ್ಯಾಯ ಸಿಗದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 


2002ರಿಂದ 137 ಬಾಲ ಕಾರ್ಮಿಕರು ಪತ್ತೆ
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಕೆ.ವಿ. ನಾಗರಾಜು, ಬಾಲ ಕಾರ್ಮಿಕರ ಯೋಜನೆ ಸೊಸೈಟಿ 2002ರಲ್ಲಿ ಆರಂಭವಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 99,000 ತಪಾಸಣೆಗಳನ್ನು ನಡೆಸಿ 137 ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. ಮಾತ್ರವಲ್ಲದೆ ಪ್ರಕರಣಗಳಿಗೆ ಸಂಬಂಧಿಸಿ ಸಂಬಂಧಪಟ್ಟ ಮಾಲಕರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News