ಜಿಡಿಪಿಯನ್ನು ಹೆಚ್ಚು ತೋರಿಸಲಾಗಿತ್ತು ಎಂಬ ಅರವಿಂದ ಸುಬ್ರಹ್ಮಣ್ಯನ್ ಹೇಳಿಕೆಗೆ ಕೇಂದ್ರದ ಪ್ರತಿಕ್ರಿಯೆ…

Update: 2019-06-12 14:37 GMT

     ಹೊಸದಿಲ್ಲಿ, ಜೂ.12: ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಬೆಳವಣಿಗೆ ಕುರಿತ ಅಂಕಿಸಂಖ್ಯೆಗಳನ್ನು ವಾಸ್ತವಕ್ಕಿಂತ ಅಧಿಕವಾಗಿ ಅಂದಾಜಿಸಲಾಗಿದೆಯೆಂಬ ತನ್ನ ಅಭಿಪ್ರಾಯವನ್ನು ಖಚಿತಪಡಿಸಲು ಸಾಧ್ಯವಿಲ್ಲವೆಂದು ಮಾಜಿ ಅರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಒಪ್ಪಿಕೊಂಡಿದ್ದಾರೆಂದು ಕೇಂದ್ರ ಸರಕಾರ ಬುಧವಾರ ತಿಳಿಸಿದೆ. ಸುಬ್ರಮಣಿಯನ್ ನೀಡಿದ ಅಂದಾಜು ಅಂಕಿಅಂಶಗಳನ್ನು ವಿಸ್ತೃತವಾಗಿ ಪರಿಶೀಲಿಸಿದ ಬಳಿವಷ್ಟೇ ಅವನ್ನು ನಿರಾಕರಿಸುವಂತಹ ನಿಖರವಾದ ದತ್ತಾಂಶಗಳನ್ನು ಮಂಡಿಸುವುದಾಗಿ ಅದು ಹೇಳಿದೆ.

 ಅರವಿಂದ ಸುಬ್ರಮಣಿಯನ್ ಅವರು ಮಂಗಳವಾರ ‘ದಿ ಇಂಡಿಯನ್ ಎಕ್ಸ್‌ಪ್ರೆಸ್ ದಿನಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ಯುಪಿಎಯ ಎರಡನೆ ಅವಧಿ ಹಾಗೂ ಎನ್‌ಡಿಎ ಮೊದಲ ಅವಧಿಯ ಸರಕಾರಗಳ ಆಡಳಿತವಿದ್ದ 2011-2017ರ ಮಧ್ಯದ ಅವಧಿಯಲ್ಲಿ ಭಾರತದ ನೈಜ ಆರ್ಥಿಕ ಬೆಳವಣಿಗೆ ದರವು 4.5 ಶೇಕಡದಷ್ಟಿತ್ತೇ ಹೊರತು, ಶೇ.7ರಷ್ಟು ಇರಲಿಲ್ಲವೆಂದು ಅಭಿಪ್ರಾಯಿಸಿ ದ್ದರು.

‘‘ಡಾ. ಸುಬ್ರಮಣಿಯನ್ ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದಾಗ ಈ ವಿಷಯವನ್ನು ಅವರು ಖಂಡಿತವಾಗಿಯೂ ಪ್ರಸ್ತಾವಿಸಬಹುದಾಗಿತ್ತು. ಆದರೆ ಅವರೇ ಹೇಳಿಕೊಂಡಿರುವ ಹಾಗೆ ಭಾರತದ ಬೆಳವಣಿಗೆ ಕುರಿತ ಅಂಕಿಸಂಖ್ಯೆ ಅರಿತುಕೊಳ್ಳಲು ಅವರು ತುಂಬಾ ಸಮಯ ತೆಗೆದುಕೊಂಡಿದ್ದರು ಹಾಗೂ ಈಗಲೂ ಅವರಿಗೆ ಈ ಬಗ್ಗೆ ಖಚಿತದ ಅಭಿಪ್ರಾಯವಿಲ್ಲ’’ ಎಂದು ನರೇಂದ್ರ ಮೋದಿಯವರ ಆರ್ಥಿಕ ಸಲಹಾ ಮಂಡಳಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಭಾರತದ ಆರ್ಥಿಕ ಬೆಳವಣಿಗೆ ಕುರಿತು ಅಂಕಿಅಂಶ ಸಚಿವಾಲಯವು ಬುಧವಾರ ಸಂಜೆ ಸ್ಪಷ್ಟನೆಯೊಂದನ್ನು ನೀಡಿ ಸ್ವೀಕೃತವಾದ ವಿಧಿವಿಧಾನಗಳು, ಕ್ರಮಗಳು ಹಾಗೂ ಲಭ್ಯವಿರುವ ದತ್ತಾಂಶಗಳನ್ನು ಆಧರಿಸಿ ಭಾರತದ ಆರ್ಥಿಕ ಬೆಳವಣಿಗೆಯನ್ನು ಅಂದಾಜಿಸಲಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ.

  ದೇಶದ ಒಟ್ಟು ಆಂತರಿಕ ಉತ್ಪನ್ನವನ್ನು ಅಂದಾಜಿಸಲು ಸುಬ್ರಮಣಿಯನ್ ಅವರು ಕ್ರಾಸ್‌ಕಂಟ್ರಿ ರಿಗ್ರೆಶನ್ ಎಂಬ ವಿಧಾನವನ್ನು ಅನುಸರಿಸಿದ್ದು, ಇದೊಂದು ವಾಡಿಕೆಯಲ್ಲಿರದ ಕ್ರಮವಾಗಿದೆಯೆಂದು ವಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News