1989ರ ಕಸ್ಟಡಿ ಸಾವು ಪ್ರಕರಣ: ಸಂಜೀವ್ ಭಟ್ ಅರ್ಜಿ ತಿರಸ್ಕರಿಸಿದ ಸುಪ್ರೀಂ

Update: 2019-06-12 14:53 GMT

ಹೊಸದಿಲ್ಲಿ, ಜೂ.12: 30 ವರ್ಷ ಹಿಂದಿನ ಕಸ್ಟಡಿ ಸಾವು ಪ್ರಕರಣದ ವಿಚಾರಣೆಯಲ್ಲಿ 11 ಹೆಚ್ಚುವರಿ ಸಾಕ್ಷಿಗಳ ತನಿಖೆ ನಡೆಸಬೇಕೆಂದು ಕೋರಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಇದೇ ರೀತಿಯ ಅರ್ಜಿಯ ಬಗ್ಗೆ ಮೂವರು ಸದಸ್ಯರ ನ್ಯಾಯಪೀಠ ಈಗಾಗಲೇ ಆದೇಶ ಹೊರಡಿಸಿದೆ. ಆದ್ದರಿಂದ ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಅಜಯ್ ರಸ್ತೋಗಿ ಅವರಿದ್ದ ರಜಾಕಾಲದ ನ್ಯಾಯಪೀಠ ತಿಳಿಸಿದೆ.

ಅರ್ಜಿಯನ್ನು ವಿರೋಧಿಸಿದ ಗುಜರಾತ್ ಸರಕಾರದ ಪರ ವಕೀಲ ಮಣೀಂದರ್ ಸಿಂಗ್, 1989ರ ಕಸ್ಟಡಿ ಸಾವು ಪ್ರಕರಣದ ಕುರಿತು ಅಂತಿಮ ವಾದವಿವಾದ ಮುಗಿದಿದ್ದು, ವಿಚಾರಣಾ ನ್ಯಾಯಾಲಯ ತನ್ನ ತೀರ್ಪನ್ನು ಕಾದಿರಿಸಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. 1989ರಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದಿದ್ದ ಕೋಮು ಗಲಭೆಯ ಸಂದರ್ಭ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದ ಸಂಜೀವ್ ಭಟ್ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಿ ಲಾಕಪ್‌ನಲ್ಲಿರಿಸಿದ್ದರು. ಇವರಲ್ಲಿ ಒಬ್ಬ ವ್ಯಕ್ತಿ ಲಾಕಪ್‌ನಲ್ಲಿ ಮರಣ ಹೊಂದಿದ್ದ.

ಅನುಮತಿ ಇಲ್ಲದೆ ಕರ್ತವ್ಯಕ್ಕೆ ಗೈರು ಹಾಜರಾಗಿರುವುದು ಹಾಗೂ ಸರಕಾರಿ ವಾಹನದ ದುರ್ಬಳಕೆ ಆರೋಪದಲ್ಲಿ 2011ರಲ್ಲಿ ಸಂಜೀವ್ ಭಟ್‌ರನ್ನು ಅಮಾನತುಗೊಳಿಸಲಾಗಿತ್ತು ಮತ್ತು 2015ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News