ನೀರವ್‌ಗೆ ಜಾಮೀನು ನಿರಾಕರಣೆ

Update: 2019-06-12 17:54 GMT

   ಲಂಡನ್,ಜೂ.12: ಬ್ರಿಟನ್‌ಗೆ ಪರಾರಿಯಾಗಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಹಗರಣದ ಆರೋಪಿ, ವಜ್ರದ ವ್ಯಾಪಾರಿ ನೀರವ್ ಮೋದಿಗೆ ಜಾಮೀನು ನೀಡಲು ಬ್ರಿಟನ್ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ತನಗೆ ಮೂರು ಬಾರಿ ಜಾಮೀನು ನಿರಾಕರಿಸಿದ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಮರುಪರಿಶೀಲನೆ ಕೋರಿ ಬ್ರಿಟನ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

 ಕೆಳನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸಲು ಲಂಡನ್ ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ನೀರವ್ ಮೋದಿ ಜಾಮೀನು ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮರುಮನವಿ ಸಲ್ಲಿಸಬೇಕಾಗುತ್ತದೆ.

 ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 13,300 ಕೋಟಿ ರೂ. ವಂಚಿಸಿದ ಹಗರಣಕ್ಕೆ ಸಂಬಂಧಿಸಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೋರಿ ಭಾರತ ಸಲ್ಲಿಸಿದ ಮನವಿಯ ವಿಚಾರಣೆಯನ್ನು ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಡೆಸುತ್ತಿದೆ. ನೀರವ್ ಮೋದಿಯನ್ನು ಮಾರ್ಚ್ 20ರಂದು ಬ್ರಿಟನ್‌ನಲ್ಲಿ ಬಂಧಿಸಲಾಗಿತ್ತು.

ತನ್ನನ್ನು ಗಡಿಪಾರುಗೊಳಿಸುವಂತೆ ಭಾರತದ ಮನವಿಯನ್ನು ಪ್ರಶ್ನಿಸಿದ್ದ ನೀರವ್ ಮೋದಿ, ತನ್ನ ಮೇಲೆ ಆರೋಪ ಹೊರಿಸುವುದಕ್ಕೆ ಮುನ್ನವೇ ತಾನು 2018ರ ಜನವರಿಯಲ್ಲಿ ಬ್ರಿಟನ್‌ಗೆ ಆಗಮಿಸಿದ್ದೆ. ತಾನು ಬ್ರಿಟನ್‌ನಲ್ಲಿ ಕಾನೂನಿಗೆ ಬದ್ಧನಾಗಿ ಜೀವಿಸುತ್ತಿದ್ದೇನೆ ಹಾಗೂ ಉದ್ಯೋಗದಲ್ಲಿದ್ದೇನೆ ಮತ್ತು ತೆರಿಗೆ ಪಾವತಿಸುತ್ತಿರುವೆ ಎಂದಿದ್ದರು.

ನೀರವ್ ಮೋದಿಯು ಸಾಕ್ಷಿಗಳ ಹೇಳಿಕೆಗಳಲ್ಲಿ ಹಸ್ತಕ್ಷೇಪ ನಡೆಸಲು ಹಾಗೂ ಪುರಾವೆಗಳನ್ನು ನಾಶಪಡಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಪ್ರಬಲವಾದ ಪುರಾವೆಗಳಿವೆಯೆಂದು ಬ್ರಿಟನ್‌ನ ರಾಯಲ್‌ಕೋರ್ಟ್ ಆಫ್ ಜಸ್ಟೀಸ್‌ನ ನ್ಯಾಯಮೂರ್ತಿ ಇಂಗ್ರಿಡ್ ಸಿಮ್ಲರ್ ಅಭಿಪ್ರಾ ಯಿಸಿದ್ದಾರೆ.ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನೀರವ್ ಮೋದಿಗೆ ಈ ಮೊದಲು ಮೂರು ಬಾರಿ ಜಾಮೀನು ನಿರಾಕರಿಸಿತ್ತು.

 ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ನೂರಾರು ಕೋಟಿ ರೂ. ವಂಚಿಸಿದ ಹಗರಣದಲ್ಲಿ ನೀರವ್ ಮೋದಿ ಹಾಗೂ ಅವರ ಚಿಕ್ಕಪ್ಪ ಮೆಹುಲ್ ಪ್ರಮುಖ ಆರೋಪಿಗಳಾಗಿದ್ದಾರೆ. ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಹಗರಣದ ತನಿಖೆಯನ್ನು 2018ರ ಜನವರಿಯಲ್ಲಿ ಸಿಬಿಐ ಆರಂಭಿಸುವುದಕ್ಕೆ ಮುನ್ನವೇ ಇವರಿಬ್ಬರೂ ಭಾರತದಿಂದ ಪರಾರಿಯಾಗಿದ್ದರು.

 ಮೆಹುಲ್ ಚೋಕ್ಸಿ ಅಂಟಿಗುವಾದಲ್ಲಿದ್ದು, ಆರೋಗ್ಯ ಸಮಸ್ಯೆಯಿಂದಾಗಿ ತನಗೆ ಭಾರತಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲವೆಂದು ಕಾರಣ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News