ವಿಶ್ವದ ಶ್ರೀಮಂತ ಅಥ್ಲೀಟ್‌ಗಳ ಪಟ್ಟಿಯಲ್ಲಿ ಕೊಹ್ಲಿ

Update: 2019-06-12 18:26 GMT

ಹೊಸದಿಲ್ಲಿ, ಜೂ.12: ಫೋರ್ಬ್ಸ್ ನಿಯತಕಾಲಿಕ ಪ್ರಕಟಿಸಿರುವ ವಿಶ್ವದ ಅತ್ಯಂತ ಶ್ರೀಮಂತ ಅಥ್ಲೀಟ್‌ಗಳ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. 100ನೇ ರ್ಯಾಂಕಿನಲ್ಲಿರುವ ಕೊಹ್ಲಿ ಪಟ್ಟಿಯಲ್ಲಿರುವ ಭಾರತದ ಏಕೈಕ ಕ್ರೀಡಾಪಟುವಾಗಿದ್ದಾರೆ.

ಅಗ್ರ-100 ಶ್ರೀಮಂತ ಅಥ್ಲೀಟ್‌ಗಳ ಯಾದಿಯಲ್ಲಿ ಕೊಹ್ಲಿ ಕೊನೆಯ ಸ್ಥಾನದಲ್ಲಿದ್ದರೆ, ಬಾರ್ಸಿಲೋನ ಹಾಗೂ ಅರ್ಜೆಂಟೀನದ ಫುಟ್ಬಾಲ್ ಸೂಪರ್‌ಸ್ಟಾರ್ ಲಿಯೊನೆಲ್ ಮೆಸ್ಸಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಫೋರ್ಬ್ಸ್ ಮಂಗಳವಾರ ತಿಳಿಸಿದೆ.

ಫೋರ್ಬ್ಸ್ ಪ್ರಕಾರ, ಕೊಹ್ಲಿ ಜಾಹೀರಾತು ಒಪ್ಪಂದಗಳ ಮೂಲಕ 21 ಮಿ.ಡಾಲರ್ ಹಾಗೂ ಸಂಭಾವನೆ ಹಾಗೂ ಪ್ರಶಸ್ತಿಗಳ ಮೂಲಕ 4 ಮಿ.ಡಾಲರ್ ಸಹಿತ ಕಳೆದ 12 ತಿಂಗಳುಗಳಲ್ಲಿ ಒಟ್ಟು 25 ಮಿಲಿಯನ್ ಯುಎಸ್ ಡಾಲರ್ ಆದಾಯ ಗಳಿಸಿದ್ದಾರೆ. ಕಳೆದ ವರ್ಷದ ಫೋರ್ಬ್ಸ್‌ಪಟ್ಟಿಯಲ್ಲಿ ಕೊಹ್ಲಿ 83ನೇ ಸ್ಥಾನದಲ್ಲಿದ್ದರು. ಜಾಹೀರಾತಿನ ಆದಾಯದಲ್ಲಿ 1 ಮಿಲಿಯನ್ ಡಾಲರ್ ಏರಿಕೆಯಾಗಿದ್ದರೂ 100ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಮೆಸ್ಸಿ ಸಂಭಾವನೆ ಹಾಗೂ ಜಾಹೀರಾತು ಒಪ್ಪಂದಗಳ ಮೂಲಕ 127 ಮಿಲಿಯನ್ ಯುಎಸ್ ಡಾಲರ್ ಆದಾಯ ಗಳಿಸುವುದರೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ಅಥ್ಲೀಟ್ ಆಗಿ ಹೊರಹೊಮ್ಮಿದ್ದಾರೆ. ಮೆಸ್ಸಿ ಇದೀಗ ದೀರ್ಘಕಾಲದ ಎದುರಾಳಿ ಕ್ರಿಸ್ಟಿಯಾನೊ ರೊನಾಲ್ಡೊಗಿಂತ ಮುಂದಿದ್ದಾರೆ. ಪೋರ್ಚುಗೀಸ್ ಸ್ಟಾರ್ ರೊನಾಲ್ಡೊ 109 ಮಿಲಿಯನ್ ಡಾಲರ್ ಆದಾಯದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News