ಯಾರು ಪಕ್ಷಕ್ಕಾಗಿ ಕೆಲಸ ಮಾಡಿಲ್ಲ ಎಂಬುದನ್ನು ಪತ್ತೆ ಹಚ್ಚುತ್ತೇನೆ: ಪ್ರಿಯಾಂಕಾ ಗಾಂಧಿ

Update: 2019-06-13 08:20 GMT

ರಾಯ್ ಬರೇಲಿ, ಜೂ.13: ತಮ್ಮ ತಾಯಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿ ಕ್ಷೇತ್ರದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಪಕ್ಷ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘‘ತನಗೆ ಮಾತನಾಡಲು ಹೇಳಲಾಗಿರುವುದರಿಂದ’’ ಕಾರ್ಯಕರ್ತರು ಪಕ್ಷದ ವಿಜಯಕ್ಕೆ ಸಾಕಷ್ಟು ಶ್ರಮಿಸಿಲ್ಲ ಎಂಬುದನ್ನು ತಾವು ನೇರಾನೇರ ಹೇಳಬಯಸುವುದಾಗಿ ಪ್ರಿಯಾಂಕಾ ತಿಳಿಸಿದರು. 

‘‘ಚುನಾವಣೆ ವೇಳೆ ಯಾರು ಪಕ್ಷಕ್ಕಾಗಿ ಕೆಲಸ ಮಾಡಿಲ್ಲ ಎಂಬುದನ್ನು ಪತ್ತೆ ಹಚ್ಚುತ್ತೇನೆ’’ ಎಂದೂ ಪ್ರಿಯಾಂಕಾ ಘೋಷಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಪೂರ್ವ ಉತ್ತರ ಪ್ರದೇಶ ಉಸ್ತುವಾರಿಯೂ ಆಗಿರುವ ಪ್ರಿಯಾಂಕಾ ತನ್ನ ತಾಯಿ ಸೋನಿಯಾ ಗಾಂಧಿ ಗೆದ್ದಿರುವ ರಾಯ್ ಬರೇಲಿ ಕ್ಷೇತ್ರದ ಮತದಾರರಿಗೆ ಧನ್ಯವಾದ ತಿಳಿಸಲು ತಾಯಿ ಆಗಮಿಸಿದ್ದಾಗ ಅವರ ಜತೆಗೆ ಬಂದಿದ್ದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದ ಏಕೈಕ ಕ್ಷೇತ್ರ ರಾಯ್ ಬರೇಲಿ ಆಗಿದೆ.

‘‘ಇಲ್ಲಿ ಭಾಷಣ ಮಾಡುವುದು ನನಗೆ ಬೇಕಿರಲಿಲ್ಲ. ಆದರೆ ನನಗೆ ಮಾತನಾಡಲು ಹೇಳಲಾಗಿರುವುದರಿಂದ ನಾನು ನಿಜವನ್ನೇ ಹೇಳುತ್ತೇನೆ. ನಿಜವೇನೆಂದರೆ ಈ ಚುನಾವಣೆಯಲ್ಲಿ ರಾಯ್ ಬರೇಲಿ ಕ್ಷೇತ್ರವನ್ನು ಸೋನಿಯಾ ಗಾಂಧಿ ಮತ್ತು ಇಲ್ಲಿನ ಜನತೆಯ ಸಹಾಯದಿಂದ ಗೆಲ್ಲಲಾಯಿತು’’ ಎಂದು ಪ್ರಿಯಾಂಕಾ ಆಕ್ರೋಶದಿಂದ ನುಡಿದರು.

‘‘ಪಕ್ಷಕ್ಕಾಗಿ ತಾವು ಕೆಲಸ ಮಾಡಿದ್ದೇವೆಂದು ಕೆಲಸ ಮಾಡಿದವರ ಹೃದಯ ಹೇಳುತ್ತದೆ, ಮಾಡದವರನ್ನು ನಾನು ಪತ್ತೆ ಹಚ್ಚುತ್ತೇನೆ’’ ಎಂದು ಪ್ರಿಯಾಂಕಾ ಹೇಳಿದರು.

ಸಕ್ರಿಯ ರಾಜಕೀಯ ಪ್ರವೇಶಿಸಿದ ನಂತರ ಪ್ರಿಯಾಂಕಾ ತನಗೆ ಉತ್ತರ ಪ್ರದೇಶದ ಜವಾಬ್ದಾರಿ ನೀಡಲಾಗಿದ್ದರಿಂದ ರಾಜ್ಯದಲ್ಲಿ ವ್ಯಾಪಕ ಪ್ರಚಾರ ಕಾರ್ಯ ಕೈಗೊಂಡಿದ್ದರೂ ಸ್ವತಃ ಅವರ ಸೋದರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಠಿಯಲ್ಲಿ ಸೋಲು ಕಾಣಬೇಕಾಗಿ ಬಂದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News