ಎಚ್‍ಐವಿ ಪೀಡಿತ ಮಕ್ಕಳ ಪ್ರೀತಿಯ ಅಪ್ಪ ‘ಸೋಲೊಮನ್ ರಾಜಾ’

Update: 2019-06-13 10:36 GMT

ಚೆನ್ನೈ, ಜೂ.13: ಚೆನ್ನೈ ನಿವಾಸಿ ಸೋಲೊಮನ್ ರಾಜಾ ಅವರನ್ನು 47 ಮಂದಿ ಎಚ್‍ಐವಿ ಪೀಡಿತ ಮಕ್ಕಳು ಪ್ರೀತಿಯಿಂದ ‘ಅಪ್ಪ’ ಎಂದೇ ಕರೆಯುತ್ತಾರೆ. ಈ ಎಲ್ಲಾ ಮಕ್ಕಳನ್ನು ಸೋಲೊಮನ್ ದತ್ತು ಪಡೆದುಕೊಂಡಿದ್ದಾರೆ.  

ಅವರ ಆರೈಕೆಯಲ್ಲಿರುವ ಮಕ್ಕಳು ಎಚ್‍ಐವಿ ಪೀಡಿತರೆಂಬ ಕಾರಣಕ್ಕೆ ತಮ್ಮ ಕುಟುಂಬದಿಂದ ತ್ಯಜಿಸಲ್ಪಟ್ಟವರಾಗಿದ್ದಾರೆ. ಸೋಲೊಮನ್ ತಮ್ಮ ಶೆಲ್ಟರ್ ಟ್ರಸ್ಟ್ ಮೂಲಕ ಈ ಮಕ್ಕಳನ್ನು ಪ್ರೀತಿಯಿಂದ ಆರೈಕೆ ಮಾಡುತ್ತಾರೆ. ಅವರ ಟ್ರಸ್ಟ್ ನಲ್ಲಿ 11 ಮಂದಿ ಸಿಬ್ಬಂದಿ ಅವರ ಈ ಉದಾತ್ತ ಕಾರ್ಯದಲ್ಲಿ ಅವರೊಂದಿಗೆ ಕೈಜೋಡಿಸಿದ್ದಾರೆ.

ಮದುವೆಯಾಗಿ ಎಂಟು ವರ್ಷಗಳಾದ ನಂತರವೂ ತಮಗೆ ಮಕ್ಕಳಾಗದೇ ಇದ್ದಾಗ ಎಚ್‍ಐವಿ ಪೀಡಿತ ಮಗುವೊಂದನ್ನು ದತ್ತು ಪಡೆಯುವ ಬಗ್ಗೆ ಸೋಲೊಮನ್ ಯೋಚಿಸಿದ್ದರು. ಹೀಗೆ ಮಗುವನ್ನು ದತ್ತು ಪಡೆಯಲು ಸಿದ್ಧತೆ ನಡೆಸುತ್ತಿರುವಾಗಲೇ ಅವರ ಪತ್ನಿ ಗರ್ಭವತಿಯಾಗಿದ್ದರು. ಮುಂದೆ ತಮ್ಮದೇ ಮಗುವನ್ನು ಸೋಲೊಮನ್ ಪಡೆದರೂ ತಾವು ತಮ್ಮ ಈ ಹಿಂದಿನ ಯೋಚನೆಯಂತೆ ಎಚ್‍ಐವಿ ಪೀಡಿತ ಮಗುವನ್ನು ದತ್ತು ಪಡೆದಿಲ್ಲ ಎಂಬ ಕೊರಗು ಅವರ ಮನಸ್ಸಿನಲ್ಲಿತ್ತು. ಕೊನೆಗೆ 2005ರಲ್ಲಿ ಅವರು ಎಚ್‍ಐವಿ ಪೀಡಿತ ಏಳು ವರ್ಷದ ಬಾಲಕನನ್ನು ದತ್ತು ಪಡೆದುಕೊಂಡರು.

“ಆ ಬಾಲಕನ ತಂದೆ ತಾಯಿ ಹಾಗೂ ಸೋದರರು ಎಚ್‍ಐವಿಗೆ ಬಲಿಯಾಗಿದ್ದರು ಹಾಗೂ ಆತ ಕೂಡ ಕೆಲವೇ ದಿನಗಳ ಕಾಲ ಬದುಕುಳಿಯುವ ಸಾಧ್ಯತೆಯಿತ್ತು'' ಎಂದು ಸೋಲೊಮನ್ ನೆನಪಿಸುತ್ತಾರೆ. ಆದರೆ ಸೋಲೊಮನ್  ತಾವು ದತ್ತು ತೆಗೆದುಕೊಂಡ ಬಾಲಕನನ್ನು ಕಚೇರಿಗೆ ಕರೆದುಕೊಂಡು ಹೋದಾಗ ಅವರ ಜತೆ ಯಾವತ್ತೂ ಊಟ ಮಾಡುತ್ತಿದ್ದ ಸಹೋದ್ಯೋಗಿಗಳು ಅವರಿಂದ ದೂರ ಸರಿದು ನಿಂತರು. ಅವರ ಅಜ್ಞಾನವನ್ನು ಕಂಡು ಅವರಿಗೆ ನೋವುಂಟಾಗಿತ್ತು. ಎಚ್‍ಐವಿ ಪೀಡಿತ ಮಕ್ಕಳಿಂದ ನಮಗೇನೂ ತೊಂದರೆಯಾಗದು ಎಂದು ತೋರಿಸಿ ಕೊಡಲು ಅವರು ಮುಂದೆ ಅಂತಹ ಹಲವು ಮಕ್ಕಳನ್ನು ದತ್ತು ಪಡೆದರು.

ಆದರೆ ಈ ಮಕ್ಕಳ ಆಶ್ರಯ ತಾಣದಲ್ಲಿ ಕೆಲಸ ಮಾಡಿದರೆ ತಮಗೂ ಎಚ್‍ಐವಿ ತಗಲಬಹುದೆಂಬ ಭಯದಿಂದ ಯಾರೂ ಮುಂದೆ ಬಾರದೇ ಇದ್ದಾಗ ಅವರು ಎಚ್‍ಐವಿ ಪೀಡಿತ ವಿಧವೆಯರು ಹಾಗೂ ಲೈಂಗಿಕ  ಕಾರ್ಯಕರ್ತೆಯರನ್ನು ಈ ಮಕ್ಕಳ ಆರೈಕೆಗೆ ನೇಮಿಸಿದರು.

ತಾವು ದತ್ತು ಪಡೆದ ಎಲ್ಲಾ ಮಕ್ಕಳ ಶಿಕ್ಷಣ ಹಾಗೂ ವೈದ್ಯಕೀಯ ವೆಚ್ಚಗಳನ್ನು ಭರಿಸುವ ಜವಾಬ್ದಾರಿ ಸೋಲೊಮನ್ ರಾಜ್ ಅವರ ಮೇಲಿದೆ. ಮಕ್ಕಳ ವೈದ್ಯಕೀಯ ವೆಚ್ಚ ಭರಿಸಲು ಸೋಲೊಮನ್ ಮೂರು ಉದ್ಯೋಗಗಳನ್ನೂ ಮಾಡುತ್ತಾರೆ.

ಕೆಲವೊಮ್ಮೆ ಮಕ್ಕಳನ್ನು ಚಿಕಿತ್ಸೆಗೆ ದಾಖಲಿಸಲು ಆಸ್ಪತ್ರೆಗಳು ನಿರಾಕರಿಸಿದ್ದೂ ಉಂಟು, ಇನ್ನು ಕೆಲವೊಮ್ಮೆ ಚಿಕಿತ್ಸೆಗೆ ದುಬಾರಿ ಶುಲ್ಕ ವಿಧಿಸಿದ್ದೂ ಉಂಟು ಎಂದು ಅವರು ಹೇಳುತ್ತಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News