ದ.ಕ.ಜಿಲ್ಲಾ ಕಸಾಪದಿಂದ ಗಿರೀಶ್ ಕಾರ್ನಾಡ್ ರಿಗೇಕೆ ಸಂತಾಪ ಸಭೆಯಿಲ್ಲ ?

Update: 2019-06-13 14:50 GMT

ಸಾಮಾನ್ಯವಾಗಿ ಕನ್ನಡದ ಯಾರೇ ಹೆಸರಾಂತ ಸಾಹಿತಿಗಳು ಮರಣ ಹೊಂದಿದಾಗ ಸಾಹಿತ್ಯ ಪರಿಷತ್ತು ಸಂತಾಪ ಸಭೆ, ನುಡಿನಮನ ಹೀಗೆ ಏನಾದರೊಂದು ಕಾರ್ಯಕ್ರಮವನ್ನು ಮೃತರ ಹೆಸರಲ್ಲಿ ಮಾಡುವುದು ಲಾಗಾಯ್ತಿನಿಂದಲೂ ಬಂದ ವಾಡಿಕೆ. ಅದಕ್ಕಿಂತ ಹೆಚ್ಚಾಗಿ ಕನ್ನಡ ಸಾಹಿತ್ಯದ ಅಧಿಕೃತ ಪ್ರಾತಿನಿಧಿಕ ಸಂಸ್ಥೆ ಎಂಬ ನೆಲೆಯಲ್ಲಿ ಅದರ ಜವಾಬ್ದಾರಿಯೂ ಆಗಿದೆ.

ಇತ್ತೀಚೆಗೆ ಮೃತರಾದ ಗಿರೀಶ್ ಕಾರ್ನಾಡ್ ಕನ್ನಡ ಹೆಸರಾಂತ ಸಾಹಿತಿ ಮತ್ತು ನಾಟಕಾರರು, ಅದಕ್ಕಿಂತ ಹೆಚ್ಚಾಗಿ ಅವರು ಕನ್ನಡಕ್ಕೆ ಏಳನೇ ಜ್ಞಾನಪೀಠ ಪ್ರಶಸ್ತಿಯ ಗೌರವ ತಂದುಕೊಟ್ಟವರೂ ಹೌದು. ಅದಕ್ಕಿಂತಲೂ ಮಿಗಿಲಾಗಿ ಅವರು ಕನ್ನಡ ಸಾಹಿತ್ಯದ ಕಂಪನ್ನು ತನ್ನ ನಾಟಕಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದವರು. ಒಂದು ವೇಳೆ ಅವರೇನಾದರೂ ಲಂಡನ್ ನಲ್ಲಿ ಜನಿಸಿದ್ದರೆ ಅವರು ವಿಲಿಯಂ ಷೇಕ್ಸ್ ಪಿಯರ್ ನ ಸಾಲಿನಲ್ಲಿರುತ್ತಿದ್ದರೇನೋ...‌

ಅವರನ್ನು ಭಾರತದ ಆಧುನಿಕ ರಂಗಭೂಮಿಯ ಷೇಕ್ಸ್‌ಪಿಯರ್ ಎನ್ನಲಂತೂ ಅಡ್ಡಿಯಿಲ್ಲ. ದುರಂತವೇನೆಂದರೆ ನಮ್ಮ ಜಿಲ್ಲೆಯಲ್ಲಿ ಅವರಿಗೆ ಸಂತಾಪ  ಸೂಚಕ, ನುಡಿನಮನಕ್ಕಿಂತ ಹೆಚ್ಚು ಅವರ ಸಾವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುವ ವಿಕೃತಿಯೇ ಮೇರೆ ಮೀರುತ್ತಿರುವುದು ಬೇಸರ ಮತ್ತು ನಾಚಿಕೆಗೇಡಿನ ಸಂಗತಿ.

ಕಾರ್ನಾಡ್ ರಿಗೆ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಂತಾಪ ಮತ್ತು ನುಡಿನಮನ ಕಾರ್ಯಕ್ರಮ ಜರಗಿದೆ. ಗಡಿನಾಡು ಕೇರಳದಲ್ಲೂ ಉತ್ತಮ ಮಟ್ಟದ ನುಡಿನಮನ ಕಾರ್ಯಕ್ರಮ ನಡೆದಿದೆ. ಅದಕ್ಕಿಂತಲೂ ಹೆಚ್ಚಾಗಿ ದೇಶದ ವಿವಿಧ ಭಾಗಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಾರ್ನಾಡ್ ರನ್ನು ನೆನಪಿಸುವ ಕಾರ್ಯಕ್ರಮಗಳಾಗಿವೆ.

ಆದರೆ ನಮ್ಮ ಜಿಲ್ಲೆಯ ಕನ್ನಡ ಸಾಹಿತ್ಯದ ಅಧಿಕೃತ ಪ್ರಾತಿನಿಧಿಕ ಸಂಸ್ಥೆ ಈ ವರೆಗೆ ಸಂತಾಪ ಸಭೆ ಮಾಡಿಲ್ಲ ಮಾತ್ರವಲ್ಲ ಈ ಪತ್ರ ಬರೆಯುವರೆಗೂ ಸಿಕ್ಕ ನಂಬಲರ್ಹ ಮಾಹಿತಿಯ ಪ್ರಕಾರ ಇನ್ನೂ ಆ ಕುರಿತಂತೆ ಯಾವುದೇ ಯೋಜನೆ ಹಾಕಿಕೊಂಡಿಲ್ಲ. ಇದಕ್ಕೆ ಜಿಲ್ಲಾ ಸಾಹಿತ್ಯ ಪರಿಷತ್ತಿನಷ್ಟೇ ಸಾಹಿತ್ಯ ಪರಿಷತ್ತಿನ ಪದ ನಿಮಿತ್ತ ಸದಸ್ಯರಾದ ಜಿಲ್ಲಾ ವಾರ್ತಾಧಿಕಾರಿ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕರು ಜವಾಬ್ದಾರರು.

ಜಿಲ್ಲಾ ಕಸಾಪ ವತಿಯಿಂದ ಈ ಹಿಂದೆಲ್ಲಾ ಸಾಹಿತಿಗಳು ಮರಣಹೊಂದಿದಾಗ ಸಂತಾಪ ಸೂಚಕ ಸಭೆ ಮಾಡಲಾಗುತ್ತಿತ್ತು. ಎರಡು ತಿಂಗಳ ಹಿಂದೆ ನಿಧನರಾದ ಬಾಬಾ ಸಾಹೇಬ್ ಅಹ್ಮದ್ ಸಾಹೇಬ್ ಸನದಿ (ಬಿ.ಎ.ಸನದಿ)ಯವರಿಗೂ ಸಂತಾಪ‌ ಸೂಚಕ ಸಭೆ ಏರ್ಪಡಿಸಲಾಗಿತ್ತು. ಆದರೆ ಕಾರ್ನಾಡ್ ರಿಗೆ ಸಂತಾಪ ಸೂಚಕ ಸಭೆ ಮಾಡದಿರುವುದರ ಹಿಂದೆ ಜಿಲ್ಲಾ ಕಸಾಪ ಅಧ್ಯಕ್ಷರು ಕಟ್ಟಾ ಬಲಪಂಥೀಯ ಧೋರಣೆಯವರಾಗಿರುವುದೇ ಕಾರಣವಾಗಿರಬಹುದು ಎಂಬ ಸಂಶಯವೂ ಕಾಡುತ್ತಿದೆ.

ಕನ್ನಡ ಸಾಹಿತ್ಯವನ್ನು ಸಾಹಿತ್ಯದ ಪ್ರಾತಿನಿಧಿಕ ಸಂಸ್ಥೆಯೊಂದು ಪಂಥದ ಆಧಾರದಲ್ಲಿ ಅಳೆಯುವುದು, ನಿರ್ಧರಿಸುವುದು ಸಲ್ಲ. ಅವರು ಕನ್ನಡಕ್ಕೆ ಕೊಟ್ಟ ಕೊಡುಗೆಯೇನು ಎನ್ನುವುದು ಮಾತ್ರ ಗಣನೆಗೆ ಬರಬೇಕು. ಅಷ್ಟಕ್ಕೂ ಸಾಹಿತ್ಯ ಪರಿಷತ್ತೆಂದರೆ ಯಾವುದೇ ಒಂದು ಪಂಥದವರ ಜಾಗೀರಲ್ಲ.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News