ಸೂರತ್ ಬೆಂಕಿ ದುರಂತ: ತನಿಖಾ ವರದಿ ಸಲ್ಲಿಸಲು ಗುಜರಾತ್ ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2019-06-13 14:45 GMT

ಅಹ್ಮದಾಬಾದ್, ಜೂ.13: ಕಳೆದ ತಿಂಗಳು ಕೋಚಿಂಗ್ ಸಂಸ್ಥೆಯೊಂದರಲ್ಲಿ ಸಂಭವಿಸಿದ, 22 ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಬೆಂಕಿ ದುರಂತದ ಬಗ್ಗೆ ತನಿಖಾ ವರದಿ ಸಲ್ಲಿಸುವಂತೆ ಗುಜರಾತ್ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.

ಬೆಂಕಿ ದುರಂತ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕೆಂದು ಕೋರಿ ಬೆಂಕಿ ದುರಂತದಲ್ಲಿ ಮೃತಪಟ್ಟಿರುವ 17 ವರ್ಷದ ಬಾಲಕಿಯ ತಂದೆ ಜಯಸುಖ್ ಗಜೇರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಮೂರ್ತಿ ಎಸ್‌ಎಚ್ ವೋರಾ, ಜುಲೈ 24ರೊಳಗೆ ವರದಿ ಸಲ್ಲಿಸುವಂತೆ ತಿಳಿಸಿದರು. ಅಲ್ಲದೆ ಗುಜರಾತ್ ಸರಕಾರಕ್ಕೆ ನೋಟಿಸನ್ನೂ ಜಾರಿಗೊಳಿಸಿದರು.

ಬೆಂಕಿ ದುರಂತ ಸಂಭವಿಸಿದ್ದ ವಾಣಿಜ್ಯ ಸಂಕೀರ್ಣದಲ್ಲಿ ಅಕ್ರಮ ನಿರ್ಮಾಣವನ್ನು ನಗರಪಾಲಿಕೆಯ ಅಧಿಕಾರಿಗಳು ಲಂಚ ಪಡೆದು ಸಕ್ರಮಗೊಳಿಸಿದ್ದಾರೆ ಎಂದು ಗಜೇರ ಆರೋಪಿಸಿದ್ದಾರೆ. ಪೊಲೀಸರು ಆರೋಪಿ ಅಧಿಕಾರಿಗಳನ್ನು ರಕ್ಷಿಸುತ್ತಿದ್ದಾರೆ. ಆದ್ದರಿಂದ ಪ್ರಕರಣವನ್ನು ನಿಷ್ಪಕ್ಷಪಾತ ವಿಚಾರಣೆಗೆ ಸಿಐಡಿ ವಶಕ್ಕೆ ಒಪ್ಪಿಸಬೇಕು ಎಂದು ಗಜೇರ ಅರ್ಜಿಯಲ್ಲಿ ಒತ್ತಾಯಿಸಿದ್ದರು. ಮುಂದಿನ ವಿಚಾರಣೆಯನ್ನು ಜುಲೈ 25ಕ್ಕೆ ನಿಗದಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News