ಬೀಜದ ಅಭಿವೃದ್ಧಿಗಾಗಿ 70ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆ: ಕೆಂಪೇಗೌಡ

Update: 2019-06-13 16:02 GMT

ಕುಂದಾಪುರ, ಜೂ.13: ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ರೈತಪರ ಸಂಘಟನೆಗಳಿಂದಾಗಿ ಜಿಲ್ಲೆಯಲ್ಲಿ ಸುಮಾರು 70 ಎಕರೆ ಪ್ರದೇಶದಲ್ಲಿ ಬೀಜದ ಅಭಿವೃದ್ಧಿಗೆ ಬೇಕಾದ ಕಬ್ಬನ್ನು ಬೆಳೆಸಲಾಗಿದೆ. ಇದು ಮುಂದಿನ ವರ್ಷದಲ್ಲಿ 3000 ಎಕರೆಗೆ ಸಾಕಾಗುವಷ್ಟು ಕಬ್ಬಿನ ಬೀಜ ಒದಗಿಸು ತ್ತದೆ. ಆದುದರಿಂದ ವಾರಾಹಿ ಯೋಜನೆಯಿಂದ ಹರಿದು ಬಂದ ನೀರನ್ನು ಸದ್ಬಳಕೆ ಮಾಡಿ ಕಬ್ಬನ್ನು ಬೆಳೆಯಲು ಕೃಷಿಕರು ಮುಂದಾಗಬೇಕು ಎಂದು ಉಡುಪಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಹೇಳಿದ್ದಾರೆ.

ದ.ಕ. ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಹಾಗೂ ಭಾರತೀಯ ಕಿಸಾನ್ ಸಂಘ ಕುಂದಾಪುರ ತಾಲೂಕು ಸಮಿತಿಯ ಸಹಯೋಗ ದೊಂದಿಗೆ ಕಾಳಾವರ ಗ್ರಾಮದ ಎಸ್.ದಿನಕರ ಶೆಟ್ಟಿಯವರ ಕಬ್ಬಿನ ಗದ್ದೆಯಲ್ಲಿ ಬುಧವಾರ ಆಯೋಜಿಸ ಲಾದ ಕಬ್ಬು ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬಹಳ ವರ್ಷಗಳ ಕಾಲ ಈ ಜಿಲ್ಲೆಯ ರೈತರ ಪ್ರಮುಖ ಬೆಳೆಯಾಗಿದ್ದ ಕಬ್ಬು ಇಂದು ಆ ಪಟ್ಟಿಯಿಂದ ಹೊರಹೋಗಿದೆ. ಅದನ್ನು ಮತ್ತೆ ಪ್ರಮುಖ ಬೆಳೆಯಾಗಿ ಪರಿಗಣಿಸಬೇಕಾದರೆ ರೈತರು ಕಬ್ಬನ್ನು ಬೆಳೆಯಬೇಕಾಗಿದೆ. ಜೊತೆಗೆ ಅದರ ಸಂಸ್ಕರಣೆ ಹಾಗೂ ಮಾರುಕಟ್ಟೆಯ ಕಡೆಗೂ ರೈತರು ತಯಾರಾಗಬೇಕು ಎಂದು ಅವರು ಕರೆ ನೀಡಿದರು.

ಈ ಜಿಲ್ಲೆಯಲ್ಲಿ ಭತ್ತದ ಬೆಳೆಯ ಪ್ರದೇಶದಲ್ಲೂ ಸಾಕಷ್ಟು ಇಳಿಕೆಯಾಗಿದೆ. ಜಿಪಿಎಸ್ ಆಧಾರಿತ ಸಮೀಕ್ಷೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಬಾರಿ ಸುಮಾರು 36ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತದ ಕೃಷಿ ಉಳಿದಿದೆ ಎಂದು ಅವರು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಭತ್ತಕ್ಕೆ ಪರ್ಯಾಯವಾಗಿ ಬೆಳೆಯಬಹುದಾದ ಕೃಷಿ ಅಂದರೆ ಕಬ್ಬು. ತಲ ತಲಾಂತರದಲ್ಲಿ ಕಬ್ಬು ಬೆಳೆದು ಆಲೆಮನೆಗಳ ಮೂಲಕ ಬೆಲ್ಲ ಮಾಡಿ ಮಾರಾಟ ಮಾಡುತ್ತಿದ್ದ ರೈತರನ್ನು ಮಧ್ಯಂತರವಾಗಿ ಬಂದ ಸಕ್ಕರೆ ಕಾರ್ಖಾನೆ ಪರಾ ವಲಂಬಿಯನ್ನಾಗಿ ಮಾಡಿತು. ಅದರೊಂದಿಗೆ ಕಾರ್ಖಾನೆಯಿಂದ ಮಾತ್ರ ಕಬ್ಬಿನ ಬೆಳೆ ಸಾಧ್ಯ ಎಂಬ ಭ್ರಮೆ ಹುಟ್ಟಿಸಿತು ಎಂದರು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಬಿಲ್ಲಾಡಿ, ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಸಮಿತಿ ಅಧ್ಯಕ್ಷ ಸೀತಾರಾಮ ಗಾಣಿಗ, ಕೋಟೇಶ್ವರದ ವಿಎನ್ ಎಸ್‌ಎನ್ ಬ್ಯಾಂಕಿನ ಅಧ್ಯಕ್ಷ ಶರತ್ ಕುಮಾರ್ ಹೆಗ್ಡೆ, ಕಾಳಾವರ ಗ್ರಾಪಂ ಅಧ್ಯಕ್ಷ ಎ.ರಘುರಾಮ ಶೆಟ್ಟಿ, ಕೃಷಿ ಇಲಾಖೆ ಕುಂದಾಪುರ ಸಹಾಯಕ ನಿರ್ದೇಶಕ ರೂಪಾ ಮಾಡ ಮಾತನಾಡಿದರು.

ಅಧ್ಯಕ್ಷತೆಯನ್ನು ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಜಯಶೀಲ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮ ಆಯೋಜಕ ಎಸ್.ದಿನಕರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ ಕುಮಾರ್ ಶೆಟ್ಟಿ ವಂದಿಸಿದರು. ರೇಷ್ಮೆ ಇಲಾಖೆ ಅಧಿಕಾರಿ ರಾಜೇಂದ್ರ ಶೆಟ್ಟಿಗಾರ್ ಬಸ್ರೂರು ಕಾರ್ಯಕ್ರಮ ನಿರೂಪಿಸಿದರು.

ಹೊಸ ಕಾರ್ಖಾನೆ ಸ್ಥಾಪನೆಗೆ ಪ್ರಸ್ತಾವ

ಉಡುಪಿ ಜಿಲ್ಲೆಯಲ್ಲಿ ವಾರಾಹಿ ಕಾಲುವೆ ಮೂಲಕ ನೀರನ್ನು ಹರಿಸಲಾದ ಪ್ರದೇಶಗಳ ಪೈಕಿ ಮೂರನೆ ಒಂದರಲ್ಲಿ ಕಬ್ಬನ್ನು ಬೆಳೆದರೂ ಕಾರ್ಖಾನೆಗಾಗುವಷ್ಟು ಕಬ್ಬು ಸಿಗುತ್ತದೆ. ಆಧುನಿಕ ತಂತ್ರಜ್ಞಾನದ ಹೊಸ ಕಾರ್ಖಾನೆಯ ಸ್ಥಾಪನೆಗೆ ತಜ್ಞರಿಂದ ವರದಿ ಪಡೆದು 40ಕೋಟಿ ರೂ. ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸ ಲಾಗಿದೆ ಎಂದು ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಜಯಶೀಲ ಶೆಟ್ಟಿ ತಿಳಿಸಿದರು.

ಹಿಂದೆ ಕಾರ್ಖಾನೆ ಹಾಗೂ ವಾರಾಹಿ ಯೋಜನೆ ಪ್ರಾರಂಭದಲ್ಲಿ ಆದ ತೀರ್ಮಾನದ ತಪ್ಪಿನಿಂದ ಕಾರ್ಖಾನೆ ಮುಚ್ಚಿತ್ತೆ ಹೊರತು ರೈತರಿಗೆ ಕಷ್ಟವಾಗಿ ಮುಚ್ಚಿದ್ದಲ್ಲ. ಇಂದು ಕಾರ್ಖಾನೆಯ ಮೇಲಿನ ರೈತರ ನಂಬಿಕೆಯು ಹಾಳಾಗಿದೆ. ಮುಂದೆ ಅದನ್ನು ಮತ್ತೆ ಸ್ಥಾಪಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕು. ಈ ಜಿಲ್ಲೆಯಲ್ಲಿ ಕಾರ್ಖಾನೆ ಹಾಗೂ ಕಬ್ಬಿನ ಬೆಳೆಯನ್ನು ಲಾಭದಾಯಕವಾಗಿ ತೋರಿಸಲು ರೈತರಿಗೆ ಸಾಧ್ಯವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News