ರಾಜಧಾನಿಗೆ ವೈದ್ಯರ ಮುಷ್ಕರದ ಬಿಸಿ

Update: 2019-06-14 03:39 GMT

ಹೊಸದಿಲ್ಲಿ, ಜೂ14: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆಯನ್ನು ಖಂಡಿಸಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ಮತ್ತು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ 3,500ಕ್ಕೂ ಹೆಚ್ಚು ಸನಿವಾಸಿ ವೈದ್ಯರು ಶುಕ್ರವಾರ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈ ಎರಡು ಆಸ್ಪತ್ರೆಗಳಲ್ಲದೇ ದಿಲ್ಲಿ ವೈದ್ಯಕೀಯ ಸಂಘವೂ ಮುಷ್ಕರಕ್ಕೆ ಕರೆ ನೀಡಿದ್ದು, ಇದರಿಂದಾಗಿ ಖಾಸಗಿ ವೈದ್ಯರು ಕೂಡಾ ಕ್ಲಿನಿಕ್‌ಗಳಿಗೆ ಬರುವ ಸಾಧ್ಯತೆ ಇಲ್ಲ. ಇದರಿಂದಾಗಿ ರಾಜಧಾನಿಯಲ್ಲಿ ಆರೋಗ್ಯ ಸೇವೆ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.

ಈ ಎರಡೂ ಆಸ್ಪತ್ರೆಗಳ ತುರ್ತು ಚಿಕಿತ್ಸಾ ವಿಭಾಗ ಮತ್ತು ತೀವ್ರ ನಿಗಾ ಘಟಕಗಳಲ್ಲಿ ಮಾತ್ರ ಹಿರಿಯ ವೈದ್ಯರು ಕಾರ್ಯ ನಿರ್ವಹಿಸುತ್ತಾರೆ ಎಂದು ಅಧಿಕೃತ ಮೂಲಗಳು ಹೇಳಿವೆ. ಈ ಎರಡು ಆಸ್ಪತ್ರೆಗಳು ಪ್ರತಿ ದಿನ ತಮ್ಮ ಕ್ಲಿನಿಕ್‌ಗಳಲ್ಲಿ 20 ಸಾವಿರ ರೋಗಿಗಳನ್ನು ತಪಾಸಣೆ ಮಾಡುತ್ತಾರೆ. ಈ ಪೈಕಿ ಶೇಕಡ 40ರಷ್ಟು ಮಂದಿ ಚಿಕಿತ್ಸೆಗಾಗಿ ಅಕ್ಕಪಕ್ಕದ ರಾಜ್ಯಗಳಿಂದ ಆಗಮಿಸುವವರು.

 "ಸಫ್ದರ್‌ಜಂಗ್ ಆಸ್ಪತ್ರೆಯ ಸುಮಾರು 1,600 ಮಂದಿ ಸನಿವಾಸಿ ವೈದ್ಯರು, ಬಂಗಾಳದ ವೈದ್ಯರಿಗೆ ಬೆಂಬಲ ಸೂಚಿಸಿ ಮುಷ್ಕರ ನಡೆಸಲಿದ್ದೇವೆ. ಇದು ಎಲ್ಲ ಕ್ಲಿನಿಕ್‌ಗಳು, ಸಾಮಾನ್ಯ ಸೇವೆಗಳ ವ್ಯತ್ಯಯಕ್ಕೆ ಕಾರಣವಾಗಲಿದೆ. ಆದಾಗ್ಯೂ ತುರ್ತು ಚಿಕಿತ್ಸಾ ವಿಭಾಗ ಎಂದಿನಂತೆ ಕಾರ್ಯನಿರ್ವಹಿಸಲಿದೆ" ಎಂದು ಆಸ್ಪತ್ರೆಯ ಸನಿವಾಸಿ ವೈದ್ಯರ ಸಂಘದ ಅಧ್ಯಕ್ಷ ಡಾ.ಪ್ರಕಾಶ್ ಠಾಕೂರ್ ಹೇಳಿದ್ದಾರೆ.

ಎರಡೂ ಆಸ್ಪತ್ರೆಗಳಲ್ಲಿ ಪ್ರತಿದಿನ ಕನಿಷ್ಠ ತಲಾ 100 ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಮುಷ್ಕರದಿಂದಾಗಿ ಅದು ರದ್ದಾಗಲಿದೆ.

ಎಲ್ಲ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಶನಿವಾರ ಮುಷ್ಕರ ನಡೆಸಲಿದ್ದಾರೆ ಎಂದು ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್‌ ಅಸೋಸಿಯೇಶನ್ (ಎಫ್‌ಓಆರ್‌ಡಿಎ) ಪ್ರಕಟಿಸಿದೆ.

ಇಂದು ಮೊಂಬತ್ತಿ ಮೆರವಣಿಗೆ ನಡೆಸಿ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿದ್ದೇವೆ. ಮುಷ್ಕರಕ್ಕೆ ಕನಿಷ್ಠ 24 ಗಂಟೆಗಳ ನೋಟಿಸ್ ನೀಡಬೇಕಾಗಿರುವುದರಿಂದ ಜೂ.15ರಂದು ಮುಷ್ಕರ ನಡೆಸುತ್ತಿದ್ದೇವೆ ಎಂದು ಅಧ್ಯಕ್ಷ ಸುಮೇಧ್ ಸಂದನ್‌ಶಿವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News