ಉಳ್ಳಾಲ ಕಡಲ್ಕೊರೆತ ಪ್ರದೇಶಗಳಿಗೆ ಸಚಿವ ಖಾದರ್ ಭೇಟಿ

Update: 2019-06-14 15:30 GMT

ಉಳ್ಳಾಲ, ಜೂ.14: ಕಳೆದ ಕೆಲವು ದಿನಗಳಿಂದ ತೀವ್ರ ಕಡಲ್ಕೊರೆತದಿಂದ ತತ್ತರಿಸಿರುವ ಉಳ್ಳಾಲಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದರು.

ಕಡಲ್ಕೊರೆತ ತೀವ್ರಗೊಂಡಿರುವ ಕೈಕೋ, ಕಿಲೇರೀಯ, ಸೋಮೇಶ್ವರ, ಉಚ್ಚಿಲ ಪ್ರದೇಶಗಳಿಗೆ ತೆರಳಿದ ಸಚಿವರು ಪರಿಶೀಲನೆ ನಡೆಸಿದರು. ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಇದೇ ಸಂದರ್ಭ ಸಚಿವರು ನೀಡಿದರು.

ಉಚ್ಚಿಲ ಉಳ್ಳಾಲ ಸಮುದ್ರ ತೀರದಲ್ಲಿ ಶಾಶ್ವತ ತಡೆಗೋಡೆ ಕೆಲಸ ಪೂರ್ತಿಗೊಳಿಸುವ ಕಾರ್ಯ ಆಗಬೇಕಿದೆ. ಉಳ್ಳಾಲ ಸಮುದ್ರ ತೀರದ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ, ಕಂದಾಯ ಸಚಿವರ ಜತೆಗೆ ಚರ್ಚಿಸಲಾಗಿದೆ. ಪೋರ್ಟ್, ರೆವೆನ್ಯೂ, ಜಿಲ್ಲಾಡಳಿತದ ಜತೆಗೂ ಚರ್ಚಿಸಲಾಗಿದೆ. ಸಂತ್ರಸ್ತರಿಗೆ ಮೂರು ದಿನಗಳೊಳಗೆ ಪರಿಹಾರದ ವ್ಯವಸ್ಥೆ ಕಲ್ಪಿಸಲಾಗುವುದು ಎಂದ ಅವರು ಅವೈಜ್ಞಾನಿಕ ಕಾಮಗಾರಿ ಎಂದು ಹೇಳಲು ಯಾರೂ ಪರಿಣತರಲ್ಲ. ಇಂಜಿನಿಯರ್ ಗಳು, ಎಕ್ಸ್ ಪರ್ಟ್ ಸಮಿತಿ ಎಂಬುದೇ ಕಾಮಗಾರಿ ಪರೀಕ್ಷಿಸಲು ಇದೆ. ಉಳ್ಳಾಲ-ಉಚ್ಚಿಲ ತೀರದಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳುವಾಗ ಪುಣೆ, ಚೆನ್ನೈ ಎಕ್ಸ್‍ಪರ್ಟ್ ಸಮಿತಿಯ ವರದಿ ಆಧರಿಸಿ ನಂತರ ಎಡಿಬಿಯ ಎಕ್ಸ್‍ಪರ್ಟ್ ಕಮಿಟಿಯವರಿಂದಲೂ ವರದಿ ಪಡೆದು ಬಳಿಕ ಕಾಮಗಾರಿ ನಡೆಸಲಾಗಿದೆ. ಸ್ಥಳೀಯರ ಅಭಿಪ್ರಾಯಗಳನ್ನು ಎಡಿಬಿಯ ಪ್ರತಿಯೊಂದು ಸಭೆಯಲ್ಲಿ ತಿಳಿಸಲಾಗಿದೆ. ಮುಂದೆಯೂ ತಿಳಿಸುವ ಪ್ರಯತ್ನ ಮಾಡಲಾಗುವುದು. ಕೋಟೆಕಾರಿನಲ್ಲಿ ಕಡಲ್ಕೊರೆತ ಸಂತ್ರಸ್ತರಿಗೆ ಒಂದೂವರೆ ಎಕರೆ ಜಮೀನು ಮಂಜೂರು ಮಾಡಲಾಗಿದೆ. ವಸತಿ ಸಮುಚ್ಛಯ ನಿರ್ಮಿಸಿ ಅವರಿಗೆ ನೀಡುವ ಯೋಜನೆ ರೂಪಿಸಲಾಗಿತ್ತು. ಆದರೆ ಸರಕಾರದ ಯೋಜನೆಯಲ್ಲಿ ಒಂದು ಬೆಡ್ ರೂಂ ಇರುವ ಮನೆಯನ್ನು ನೀಡುವ ಮಂಜೂರಾತಿಯೂ ದೊರೆತಿತ್ತು. ಅದು ಹೆಚ್ಚು ಜನರಿರುವ ಕುಟುಂಬಗಳಿಗೆ ವಾಸಿಸಲು ಅಸಾಧ್ಯ ಎಂದು ಮತ್ತೆ ಕನಿಷ್ಟ ಎರಡು ಬೆಡ್ ರೂಂ ಇರುವ ಮನೆಗಳನ್ನು ನೀಡುವ ಸಲುವಾಗಿ ಪ್ರಸ್ತಾಪವನ್ನು ಸರಕಾರದ ಮುಂದೆ ಇರಿಸಲಾಗಿದೆ. ಈ ನಡುವೆ ಹಲವರಿಗೆ ಮಂಜೂರಾದ ಸ್ಥಳ ಮೀನುಗಾರಿಕೆ ಕೆಲಸಗಳಿಗೆ ಕಷ್ಟಕರ ಅದಕ್ಕಾಗಿ ಮುಂದೆ ಜಾಗವನ್ನು ಗುರುತಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.

ಈ ಸಂದರ್ಭ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅವರು ಜೊತೆಗಿದ್ದರು.

ಕಳೆದ 3-4 ದಿನಗಳಿಂದ ಉಳ್ಳಾಲ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರ ಸ್ವರೂಪ ಪಡೆದಿದ್ದು, ಈಗಾಗಲೇ ಹಲವು ಮನೆಗಳು ಸಮುದ್ರಪಾಲಾಗಿವೆ. ಕೆಲವೆಡೆ ಮಸೀದಿ ಕೂಡಾ ಅಪಾಯದಂಚಿಗೆ ಸಿಲುಕಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News