ಯಾವ ಅಧಿಕಾರಿಯೂ ನಮ್ಮನ್ನು ಭೇಟಿಯಾಗಿಲ್ಲ: ಪತನಗೊಂಡ ವಾಯುಪಡೆ ವಿಮಾನದಲ್ಲಿದ್ದ ರಾಜೇಶ್ ರ ಕುಟುಂಬದ ಅಳಲು

Update: 2019-06-14 07:27 GMT

ಹೊಸದಿಲ್ಲಿ, ಜೂ.14: ಜೂನ್ 3ರಂದು ನಾಪತ್ತೆಯಾಗಿದ್ದ ಎಎನ್-32 ವಿಮಾನದ ಅವಶೇಷಗಳು ಪತ್ತೆಯಾಗಿ ಅದರಲ್ಲಿದ್ದ 13 ಮಂದಿಯಲ್ಲಿ ಯಾರೊಬ್ಬರೂ ಬದುಕುಳಿದಿಲ್ಲವೆಂಬುದು ದೃಢಪಟ್ಟ ನಂತರ ವಿಮಾನದಲ್ಲಿದ್ದವರಲ್ಲಿ ಒಬ್ಬರಾಗಿದ್ದ  ಹಾಗೂ ಐಎಎಫ್ ಅಡುಗೆಯಾಳಾಗಿ ಕೆಲಸ ಮಾಡುತ್ತಿದ್ದ ರಾಜೇಶ್ ಕುಟುಂಬವನ್ನು ಸೇನೆಯ ಯಾವೊಬ್ಬ ಅಧಿಕಾರಿಯೂ ಸಂಪರ್ಕಿಸಿಲ್ಲ. ವಾಸ್ತವವಾಗಿ ವಿಮಾನ ನಾಪತ್ತೆಯಾದಂದಿನಿಂದ ಯಾವುದೇ ವಾಯುಸೇನೆ ಅಧಿಕಾರಿ  ನಮ್ಮನ್ನು ಭೇಟಿಯಾಗಿಲ್ಲ ಎಂದು ಕುಟುಂಬ ಆರೋಪಿಸಿದೆ.

ಆದರೆ ವಿಮಾನದಲ್ಲಿದ್ದವರಲ್ಲಿ ಯಾರೂ ಬದುಕುಳಿದಿಲ್ಲ ಎಂದು ತಿಳಿದು ಬಂದ ನಂತರ ರಾಜೇಶ್ ಸೋದರ,  ದಿಲ್ಲಿಯಲ್ಲಿ ಟೀ ಸ್ಟಾಲ್ ನಡೆಸುವ ಸಂತೋಷ್ ಗೆ  ವಿಮಾನದ ಪೈಲಟ್ ನ ಮಾವ  ಕರೆ ಮಾಡಿ ಈ ಸುದ್ದಿ ತಿಳಿಸಿದ್ದರು.

“ನನ್ನ ಸೋದರ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 13 ಮಂದಿ ಮೃತಟ್ಟರೆಂದು ಅವರು ತಿಳಿಸಿದರು'' ಎಂದು ಸಂತೋಷ್ (37) ಹೇಳುತ್ತಾರೆ. ಕುಮಾರ್ (23) ಭಾರತೀಯ ವಾಯುಪಡೆಯನ್ನು ನಾಲ್ಕು ವರ್ಷಗಳ ಹಿಂದೆ ಸೇರಿದ್ದರು.

``ನಾನು ಹೊಟೇಲ್ ಅಶೋಕ್ ಸಮೀಪ ಟೀ ಸ್ಟಾಲ್ ನಡೆಸುತ್ತಿದ್ದೇನೆ.  ವಿಮಾನ ನಾಪತ್ತೆಯಾದ ಮರುದಿನ ಯಾರೋ ನನಗೆ  ಸೋಳಂಕಿ ಸಾಬ್ (ರಾಜ್ ಕುಮಾರ್ ಸೋಳಂಕಿ, ಪೈಲಟ್ ಮಾವ) ಅವರ ನಂಬರ್ ಕೊಟ್ಟರು. ಅವರು ಇಲ್ಲೇ ಹತ್ತಿರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂದಿನಿಂದ ಅವರೇ ನಮಗೆ ಏನಾದರೂ ಮಾಹಿತಿ ನೀಡುತ್ತಲಿದ್ದಾರೆ'' ಎಂದು ಸಂತೋಷ್ ವಿವರಿಸುತ್ತಾನೆ.

ವಿಮಾನದಲ್ಲಿದ್ದ ಯಾರೂ ಉಳಿದಿಲ್ಲ ಎಂದು ವಾಯುಸೇನೆ ಘೋಷಿಸಿದ ಮೂರು ಗಂಟೆಗಳ ನಂತರವೂ ಸಂತೋಷ್ ಹೆತ್ತವರು, ಸೋದರರು ಹಾಗೂ ರೇಸ್ ಕೋರ್ಸ್ ಕ್ಲಬ್ ರಸ್ತೆಯಲ್ಲಿರುವ  ಕೊಳೆಗೇರಿ ನಿವಾಸಿಗಳಿಗೆ ಆತನ ಮೃತದೇಹ ಎಲ್ಲಿದೆಯೆಂಬ ಬಗ್ಗೆ ತಿಳಿದಿರಲಿಲ್ಲ.

``ನಮ್ಮ ಗೊಡವೆ ಯಾರಿಗೂ ಇಲ್ಲ. ನಮ್ಮ ಸುತ್ತ ವಾಯುಪಡೆಯ ಕಟ್ಟಡಗಳಿವೆ ಆದರೆ ಯಾರೂ ನಮ್ಮ ಬಳಿ ಬಂದಿಲ್ಲ. ನನ್ನ ತಂದೆ ಕೂಡ ವಾಯು ಸೇನೆಯಲ್ಲಿದ್ದರು'' ಎಂದು ಸಂತೋಷ್ ಹೇಳುತ್ತಾರೆ.

ತನ್ನ ತಂದೆಯ ಕೆಲಸದಿಂದ ಪ್ರೇರಿತನಾಗಿ ಕುಮಾರ್ ವಾಯುಸೇನೆ ಸೇರಿದ್ದ. ಕಳೆದ ನವೆಂಬರ್ ತಿಂಗಳಿನಲ್ಲಿ ವಿವಾಹವಾಗಿದ್ದ ಆತ ಅಸ್ಸಾಂನ ಜೋರ್ಹಟ್ ಎಂಬಲ್ಲಿ ಕರ್ತವ್ಯದಲ್ಲಿದ್ದ. ಜೂನ್ 3ರಂದು ಆ ವಿಮಾನವೇರುವ ಕೆಲವೇ ನಿಮಿಷಗಳ ಮೊದಲು ತಂದೆ ಜತೆ ಮಾತನಾಡಿದ್ದ. ವಿಮಾನದಿಂದಿಳಿದ ಬಳಿಕ ಮತ್ತೆ ಕರೆ ಮಾಡುವುದಾಗಿ ತಿಳಿಸಿದ್ದ'' ಎಂದು ಆತ ನೆನಪಿಸಿಕೊಳ್ಳುತ್ತಾರೆ.

“ಎರಡು ತಿಂಗಳ ಹಿಂದೆ ಆತ ಮನೆಗೆ ರಜೆ ಮೇಲೆ ಬಂದಿದ್ದ. ಆತನನ್ನು ಬೀಳ್ಕೊಡಲು ರೈಲು ನಿಲ್ದಾಣಕ್ಕೆ ಹೋಗಿದ್ದೆ. ಅದೇ ಕೊನೆಯ ಭೇಟಿಯೆಂದು ಯಾರಿಗೆ ಗೊತ್ತಿತ್ತು?'' ಎಂದು ಅವರು ನೋವಿನಿಂದ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News