×
Ad

8 ವರ್ಷದ ಬಾಲಕ ಯಾಸೀನ್ ನ ಕಥೆ ಈಗ ಶಾಲಾ ಪಠ್ಯ ಪುಸ್ತಕದಲ್ಲಿ!

Update: 2019-06-14 16:57 IST

ಈರೋಡ್, ಜೂ.14: ತಮಿಳುನಾಡಿನ ರಾಜ್ಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿ (ಎಸ್‍ ಸಿಇಆರ್‍ಟಿ) ವಿದ್ಯಾರ್ಥಿಗಳಿಗೆ ಸ್ಥಳೀಯ ಸಾಧಕರನ್ನು ಪರಿಚಯಿಸುವ ಕಾರ್ಯವನ್ನು ತನ್ನ ಪಠ್ಯಕ್ರಮದ ಮೂಲಕ ಮಾಡುತ್ತಿದೆ. ಇದರಂತೆ ಒಂದನೇ ಮತ್ತು 12ನೇ ತರಗತಿ ತನಕದ ವಿದ್ಯಾರ್ಥಿಗಳಿಗಾಗಿನ ಹೊಸ ಪಠ್ಯಕ್ರಮದಲ್ಲಿ ಪ್ಯಾಡ್ ಮ್ಯಾನ್ ಅರುಣಾಚಲಂ ಮುರುಗನಾಥಂ ಹಾಗೂ ಪ್ಯಾರಾ ಒಲಿಂಪಿಕ್ ತಾರೆ ಮರಿಯಪ್ಪನ್ ತಂಗವೇಲು ಅವರ ಕುರಿತಾದ ಪಾಠಗಳಿವೆ. ಇದೀಗ  ಎರಡನೇ ತರಗತಿಯ ಪಠ್ಯಕ್ಕೆ ಸೇರ್ಪಡೆಯಾಗಿರುವ ಇನ್ನೊಬ್ಬ ಸಾಧಕ ಎಂಟು ವರ್ಷದ ಬಾಲಕ ಎಂ ಯಾಸೀನ್. ಅಂದ ಹಾಗೆ ಯಾಸೀನ್ ತನ್ನ ಪ್ರಾಮಾಣಿಕತೆಗಾಗಿ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದಿದ್ದಾನೆ.

ಕಾರ್ಮಿಕ ದಂಪತಿ ಬಚ್ಚ ಹಾಗೂ ಅಫ್ರೋಝ್ ಬೇಗಂ ಅವರ ಪುತ್ರನಾಗಿರುವ ಯಾಸಿನ್ ಕಳೆದ ವರ್ಷ ತನ್ನ ಸಹಪಾಠಿಗಳೊಂದಿಗೆ ಮಧ್ಯಾಹ್ನದ ವಿರಾಮದ ವೇಳೆ ಆಟವಾಡುತ್ತಿದ್ದಾಗ ಶಾಲಾ ಕ್ಯಾಂಪಸ್ಸಿನಲ್ಲಿ ಯಾರೋ ತಪ್ಪಿ ಬಿಟ್ಟು ಹೋಗಿರುವ ಬ್ಯಾಗ್ ನೋಡಿದ್ದ. ತಡ ಮಾಡದೆ ಈ ಬ್ಯಾಗ್ ಬಗ್ಗೆ ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಿದ್ದ. ಶಿಕ್ಷಕರು ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ರೂ 50,000 ನಗದು ಇರುವುದು ಪತ್ತೆಯಾಗಿತ್ತು.

ಯಾಸೀನ್ ಪ್ರಾಮಾಣಿಕತೆಯನ್ನು ಶ್ಲಾಘಿಸಿದ ಶಿಕ್ಷಕರು ತಕ್ಷಣ ಎಸ್‍ಪಿ ಶಕ್ತಿಗಣೇಶನ್ ಅವರಿಗೆ  ಮಾಹಿತಿ ನೀಡಿದ್ದರು. ನಂತರ ಬ್ಯಾಗನ್ನು ಅದರ ವಾರಿಸುದಾರರಿಗೆ ಹಸ್ತಾಂತರಿಸಲಾಗಿತ್ತು.

ಬಾಲಕನ ಪ್ರಾಮಾಣಿಕತೆಯ ಬಗ್ಗೆ ಮಾಧ್ಯಮಗಳೂ ವರದಿ ಮಾಡಿದ್ದವು. ಆತನ ಬಗ್ಗೆ ತಿಳಿದುಕೊಂಡ ಸೂಪರ್ ಸ್ಟಾರ್ ರಜನೀಕಾಂತ್ ಆತನನ್ನು ತಮ್ಮ ಮನೆಗೆ ಆಹ್ವಾನಿಸಿದ್ದರಲ್ಲದೆ ಆತನ ಶಿಕ್ಷಣಕ್ಕೆ ಸಹಾಯ ಮಾಡುವುದಾಗಿಯೂ ಹೇಳಿದ್ದಾರೆ.

ಈಗ ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಯಾಸೀನ್ ನ ಕಥೆಯ ಪಾಠ ``ಆತಿಸೂಡಿ-ನೆರ್ಪಡ ಒಝುಗು'' ಎಂಬ ಶೀರ್ಷಿಕೆ ಹೊಂದಿದೆ. ಘಟನೆಯನ್ನು ಚಿತ್ರಗಳೊಂದಿಗೆ ಈ ಪಾಠದಲ್ಲಿ ವಿವರಿಸಲಾಗಿದೆ. ಯಾಸೀನ್ ಎಸ್‍ಪಿ ಶಕ್ತಿಗಣೇಶನ್ ಜತೆಗಿರುವ ಫೋಟೋ ಕೂಡ ಪ್ರಕಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News