ಪ್ರತಿಭಟನೆಗೆ ಮಣಿದ ದಕ್ಷಿಣ ರೈಲ್ವೆ: ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಮಾತನಾಡಬೇಕೆಂಬ ಸುತ್ತೋಲೆ ವಾಪಸ್

Update: 2019-06-14 14:19 GMT

ಚೆನ್ನೈ,ಜೂ.14: ಸೂಚನೆಗಳು ಸಂಪೂರ್ಣವಾಗಿ ತಿಳಿಯುವಂತಾಗಲು ಅಧಿಕೃತ ಸಂವಹನಗಳಲ್ಲಿ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳನ್ನು ಮಾತ್ರ ಬಳಸಬೇಕೆಂದು ಸ್ಟೇಷನ್ ಮಾಸ್ಟರ್‌ಗಳು ಮತ್ತು ರೈಲ್ವೆ ಕಾರ್ಯಾಚರಣೆ ನಿಯಂತ್ರಣ ಕಚೇರಿಗಳಿಗೆ ಕಳುಹಿಸಿದ್ದ ಸುತ್ತೋಲೆಯನ್ನು ದಕ್ಷಿಣ ರೈಲ್ವೆಯು ಶುಕ್ರವಾರ ಹಿಂದೆಗೆದುಕೊಂಡಿದೆ.

ಡಿಎಂಕೆ ಬೆಂಬಲಿಗರು ಇಲ್ಲಿಯ ಪಾರ್ಕ್ ಟೌನ್‌ನಲ್ಲಿರುವ ದ.ರೈಲ್ವೆ ಕಚೇರಿಯ ಎದುರು ಪ್ರತಿಭಟನೆಯನ್ನು ನಡೆಸಿದ ಬಳಿಕ ಇಲಾಖೆಯು ಬುಧವಾರ ಹೊರಡಿದ್ದ ಸುತ್ತೋಲೆಯನ್ನು ವಾಪಸ್ ಪಡೆದಿದೆ.

  ಸ್ಟೇಷನ್ ಮಾಸ್ಟರ್‌ಗಳು ಮತ್ತು ಸೆಕ್ಷನ್ ನಿಯಂತ್ರಣ ಕಚೇರಿಗಳು ಪರಸ್ಪರರಿಗೆ ರವಾನಿಸುವ ಪ್ರತಿಯೊಂದೂ ಸೂಚನೆ ಸ್ಪಷ್ಟವಾಗಿರಬೇಕು ಹಾಗೂ ಸಂಪೂರ್ಣವಾಗಿ ತಿಳಿಯುವಂತಿರಬೇಕು ಮತ್ತು ಇದು ಉಭಯರ ಹೊಣೆಗಾರಿಕೆಯಾಗಿದೆ. ಇದಕ್ಕಾಗಿ ಪ್ರಾದೇಶಿಕ ಭಾಷೆಯನ್ನು ಬಳಸದೆ ಹಿಂದಿ ಮತ್ತು ಇಂಗ್ಲಿಷ್‌ನ್ನು ಮಾತ್ರ ಬಳಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ರೈಲ್ವೆ ಸಂಕೇತಗಳನ್ನು ಸರಿಯಾಗಿ ತಿಳಿದುಕೊಳ್ಳಲು ಮತ್ತು ಅದನ್ನು ತಪ್ಪಾಗಿ ವ್ಯಾಖ್ಯಾನಿಸದಿರಲು ಈ ಸೂಚನೆಯನ್ನು ರೈಲ್ವೆಯ ಕಾರ್ಯಾಚರಣೆ ವಿಭಾಗಕ್ಕೆ ಮಾತ್ರ ನೀಡಲಾಗಿತ್ತು ಎಂದು ದಕ್ಷಿಣ ಮಧ್ಯ ರೈಲ್ವೆಯ ಮಹಾ ಪ್ರಬಂಧಕ ಗಜಾನನ ಮಲ್ಯ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

 ಈ ಸುತ್ತೋಲೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು,ಇದು ರೈಲ್ವೆ ಇಲಾಖೆಯ ಸೊಕ್ಕಿನ ವರ್ತನೆಯಾಗಿದೆ. ಅದು ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ಮಾತ್ರವಲ್ಲ,ಅದನ್ನು ಅಗ್ರಭಾಷೆಯನ್ನಾಗಿ ಮಾಡಲೂ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News