ಗುಜರಾತ್ ಚಂಡಮಾರುತ : ಸ್ಥಳಾಂತರಗೊಂಡವರಿಗೆ 3 ದಿನ ದಿನಭತ್ತೆ ನೀಡಲು ಸರಕಾರದ ನಿರ್ಧಾರ

Update: 2019-06-14 14:23 GMT

ಅಹ್ಮದಾಬಾದ್, ಜೂ.14: ಗುಜರಾತ್‌ಗೆ ಎದುರಾಗಿದ್ದ ವಾಯು ಚಂಡಮಾರುತದ ಭೀತಿ ದೂರವಾಗಿದೆ ಎಂದು ತಿಳಿಸಿರುವ ಮುಖ್ಯಮಂತ್ರಿ ವಿಜಯ್ ರೂಪಾನಿ, ಸ್ಥಳಾಂತರಗೊಂಡಿದ್ದ ಸುಮಾರು 2.75 ಲಕ್ಷ ಜನರನ್ನು ಸ್ವಸ್ಥಾನಕ್ಕೆ ಕಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗಾಂಧೀನಗರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ, ಸ್ಥಳಾಂತರಗೊಂಡಿರುವ ಜನರನ್ನು ಅವರ ಮನೆಗೆ ಮರಳಿ ಕಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಸ್ಥಳಾಂತರಗೊಂಡಿರುವವರಿಗೆ ಮುಂದಿನ ಮೂರು ದಿನ ದಿನಭತ್ಯೆ ನೀಡಲಾಗುವುದು . ಇದಕ್ಕೆ 5.5 ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿಸಿದರು.

ಶನಿವಾರದಿಂದ ಶಾಲೆ, ಕಾಲೇಜುಗಳು ನಿಗದಿಯಂತೆ ಕಾರ್ಯಾಚರಿಸಲಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕೆ 10 ಕರಾವಳಿ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದ್ದ ಹಿರಿಯ ಅಧಿಕಾರಿಗಳು ಹಾಗೂ ಸಚಿವರನ್ನು ಮರಳಿ ಬರುವಂತೆ ಸೂಚಿಸಲಾಗಿದೆ. ಶುಕ್ರವಾರದಿಂದ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಸಂಚಾರ ಆರಂಭಿಸಿವೆ ಎಂದು ರೂಪಾನಿ ತಿಳಿಸಿದ್ದಾರೆ. ಆದರೆ ಮುನ್ನೆಚ್ಚರಿಕೆಯ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ರವಿವಾರದವರೆಗೆ ಕರಾವಳಿಯಲ್ಲಿಯೇ ಇರುತ್ತವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News