ಉ.ಪ್ರದೇಶ: ಚಂಡಮಾರುತಕ್ಕೆ 13 ಬಲಿ

Update: 2019-06-14 14:24 GMT

ಲಕ್ನೊ, ಜೂ.14: ಉತ್ತರಪ್ರದೇಶದಲ್ಲಿ ಬುಧವಾರ ಬೀಸಿದ ತೀವ್ರ ಚಂಡಮಾರುತದಿಂದ ಕನಿಷ್ಟ 13 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ 22 ಜಾನುವಾರುಗಳೂ ಸಾವನ್ನಪ್ಪಿದ್ದು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ.

ಸುಮಾರು 93 ಮನೆಗಳಿಗೆ ಹಾನಿಯಾಗಿದೆ ಎಂದು ರಾಜ್ಯದ ಪರಿಹಾರ ಆಯುಕ್ತರ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಚಂಡಮಾರುತದ ಅಧಿಕ ಪ್ರಭಾವಕ್ಕೆ ಒಳಗಾಗಿರುವ ಸಿದ್ಧಾರ್ಥ ನಗರದಲ್ಲಿ ಗರಿಷ್ಟ ಹಾನಿಯಾಗಿದ್ದು ನಾಲ್ಕು ಜನ ಮೃತಪಟ್ಟಿದ್ದಾರೆ. ದಿಯೋರಿಯಾ ಜಿಲ್ಲೆಯಲ್ಲಿ ಮೂವರು, ಬಲ್ಲಿಯಾ ಜಿಲ್ಲೆಯಲ್ಲಿ ಇಬ್ಬರು, ಅಯೋಧ್ಯ, ಲಕ್ಷ್ಮೀಪುರ ಖಿರಿ, ಕುಶಿನಗರ ಮತ್ತು ಸೋನ್‌ಭದ್ರ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ ಎಂದು ಪರಿಹಾರ ಆಯುಕ್ತ ಜಿಎಸ್ ಪ್ರಿಯದರ್ಶಿ ಹೇಳಿದ್ದಾರೆ. ಈ ಮಧ್ಯೆ, ಶನಿವಾರ ಮತ್ತು ರವಿವಾರ ಉತ್ತರಪ್ರದೇಶದ ಕೆಲವು ಪ್ರದೇಶಗಳಲ್ಲಿ ಮಳೆ ಅಥವಾ ಚಂಡಮಾರುತ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

 ಜೂನ್ 7ರಂದು ಉತ್ತರಪ್ರದೇಶದಲ್ಲಿ ಧೂಳಿನ ಚಂಡಮಾರುತ ಹಾಗೂ ಸಿಡಿಲಿನ ಆಘಾತದಿಂದ 26 ಮಂದಿ ಮೃತಪಟ್ಟಿದ್ದು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹಲವು ಮನೆಗಳು ಕುಸಿದಿದ್ದು ಹಲವೆಡೆ ಬೃಹತ್ ಮರಗಳು ರಸ್ತೆ ಮತ್ತು ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದ ಕಾರಣ ಜನಜೀವನ ಅಸ್ತವ್ಯಸ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News