ಸೋಷಿಯಲ್ ಮೀಡಿಯಾ ಪೋಸ್ಟ್: ಈ ವಾರ ದೇಶಾದ್ಯಂತ 8 ಜನರ ಬಂಧನ

Update: 2019-06-14 14:26 GMT

ಹೊಸದಿಲ್ಲಿ,ಜೂ.14: ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಈ ವಾರ ದೇಶಾದ್ಯಂತ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.

  ಉತ್ತರ ಪ್ರದೇಶವೊಂದರಲ್ಲೇ ಕನಿಷ್ಠ ಐವರನ್ನು ಬಂಧಿಸಲಾಗಿದೆ. ಮುಖ್ಯಮಂತ್ರಿ ಆದಿತ್ಯನಾಥ್ ನಿವಾಸದ ಹೊರಗೆ ಮಹಿಳೆಯೋರ್ವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡಿದ್ದಕ್ಕಾಗಿ ಶನಿವಾರ ದಿಲ್ಲಿ ಮೂಲದ ಪತ್ರಕರ್ತ ಪ್ರಶಾಂತ ಕನೋಜಿಯಾರನ್ನು ಬಂಧಿಸಲಾಗಿತ್ತು. ತಾನು ವೀಡಿಯೊ ಚಾಟ್ ಮೂಲಕ ಆದಿತ್ಯನಾಥರೊಂದಿಗೆ ಮಾತನಾಡುತ್ತಿದ್ದೇನೆ ಮತ್ತು ಅವರಿಗೆ ವಿವಾಹದ ಪ್ರಸ್ತಾವ ಕಳುಹಿಸಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದರು. ಕನೋಜಿಯಾರನ್ನು ಬಿಡುಗಡೆಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಆದೇಶಿಸಿತ್ತು.

 ಕನೋಜಿಯಾ ಶೇರ್ ಮಾಡಿದ್ದ ವೀಡಿಯೊವನ್ನು ಪ್ರಸಾರಿಸಿ ಮುಖ್ಯಮಂತ್ರಿಗಳ ಮಾನಹಾನಿಯನ್ನುಂಟು ಮಾಡಿದ ಆರೋಪದಲ್ಲಿ ರವಿವಾರ ನೇಷನ್ ಲೈವ್ ಸುದ್ದಿವಾಹಿನಿಯ ಮುಖ್ಯಸ್ಥೆ ಇಷಿತಾ ಸಿಂಗ್ ಮತ್ತು ಸಂಪಾದಕ ಅನುಜ್ ಶುಕ್ಲಾ ಅವರನ್ನು ಬಂಧಿಸಲಾಗಿತ್ತು.

   ಸಾಮಾಜಿಕ ಮಾಧ್ಯಮಗಳಲ್ಲಿ ಆದಿತ್ಯನಾಥ ಕುರಿತು ಆಕ್ಷೇಪಾರ್ಹ ಪೋಸ್ಟ್‌ನ್ನು ಶೇರ್ ಮಾಡಿಕೊಂಡಿದ್ದಕ್ಕಾಗಿ ಸೋಮವಾರ ಗೋರಖ್‌ಪುರ ಜಿಲ್ಲೆಯ ಗುಜರಿ ವ್ಯಾಪಾರಿ ಪೀರ್ ಮುಹಮ್ಮದ್ ಎಂಬಾತನನ್ನು ಬಂಧಿಸಲಾಗಿದೆ. ಇದನ್ನು ಪೋಸ್ಟ್ ಮಾಡಿದ್ದ ಧಮೇಂದ್ರ ಭಾರ್ತಿ ವಿದೇಶದಲ್ಲಿರುವುದರಿಂದ ಬಂಧಿಸಲು ಸಾಧ್ಯವಾಗಿಲ್ಲ. ಆಕ್ಷೇಪಾರ್ಹ ಪೋಸ್ಟ್‌ಗಾಗಿ ಇದೇ ಜಿಲ್ಲೆಯ ನರ್ಸಿಂಗ್ ಹೋಮ್‌ವೊಂದರ ಮ್ಯಾನೇಜರ್ ರಾಮ ಪ್ರಸಾದ್ ಎಂಬಾತನನ್ನೂ ಬಂಧಿಸಲಾಗಿದೆ.

ಛತ್ತೀಸ್‌ಗಡದ ರಾಯಪುರದಲ್ಲಿ ಮುಖ್ಯಮಂತ್ರಿ ಭೂಪೇಶ ಬಾಘೆಲ್ ಕುರಿತು ಆಕ್ಷೇಪಾರ್ಹ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಕ್ಕಾಗಿ ಲಲಿತ್ ಯಾದವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

 ಅಸ್ಸಾಮಿನಲ್ಲಿ ರಾಜ್ಯದ ಮೂಲನಿವಾಸಿಗಳನ್ನು ವಲಸಿಗ ಮುಸ್ಲಿಮರಿಂದ ರಕ್ಷಿಸಲು ವಿಫಲ ಎಂದು ನೇತೃತ್ವದ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಿದ್ದಕ್ಕಾಗಿ ಗುರುವಾರ ಬಿಜೆಪಿಯ ಮಾಹಿತಿ ತಂತ್ರಜ್ಞಾನ ಕೋಶದ ಸದಸ್ಯ ನಿತು ಬೋರಾ ಎಂಬಾತನನ್ನು ಗುರುವಾರ ಬಂಧಿಸಲಾಗಿದೆ.

ಫೇಸ್‌ಬುಕ್‌ನಲ್ಲಿ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರ ವಿರುದ್ಧ ಅವಮಾನಕಾರಿ ಪೋಸ್ಟ್‌ಗಳಿಗಾಗಿ ಬಿಜೆಪಿ ಬೆಂಬಲಿಗನೋರ್ವನನ್ನು ಬುಧವಾರ ಪೊಲೀಸರು ಬಂಧಿಸಿದ್ದರು.

   ಅತ್ತ ಕೇರಳದಲ್ಲಿ ಮುಖ್ಯಮಂತ್ರಿ ಪಿ.ವಿಜಯನ್ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಇತ್ತೀಚಿನ ತಿಂಗಳುಗಳಲ್ಲಿ ಹಲವರ ವಿರುದ್ಧ 149 ಪ್ರಕರಣಗಳನ್ನು ವಿರುದ್ಧ ಪೊಲೀಸರು,26 ಜನರನ್ನು ಬಂಧಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಮೇಶ ಚೆನ್ನಿತಲ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News