ಧಾರಾವಾಹಿಗಳ ಟೈಟಲ್ಗಳನ್ನು ಅವುಗಳ ಭಾಷೆಗಳಲ್ಲೇ ತೋರಿಸಿ: ಟಿವಿ ವಾಹಿನಿಗಳಿಗೆ ಕೇಂದ್ರದ ಸೂಚನೆ

Update: 2019-06-14 15:38 GMT

 ಹೊಸದಿಲ್ಲಿ,ಜೂ.14: ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿಯ ಧಾರಾವಾಹಿಗಳ ಟೈಟಲ್ ಅಥವಾ ಶೀರ್ಷಿಕೆಗಳನ್ನು ಅವು ಪ್ರಸಾರಗೊಳ್ಳುವ ಭಾಷೆಗಳಲ್ಲಿಯೇ ಪ್ರದರ್ಶಿಸುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಎಲ್ಲ ಖಾಸಗಿ ಟಿವಿ ವಾಹಿನಿಗಳಿಗೆ ಸೂಚಿಸಿದೆ.

ಟಿವಿ ವಾಹಿನಿಗಳು ಪ್ರಸಾರಿಸುವ ಧಾರಾವಾಹಿಗಳು ಅಥವಾ ಕಾರ್ಯಕ್ರಮಗಳ ಆರಂಭ ಅಥವಾ ಅಂತ್ಯದಲ್ಲಿ ತೋರಿಸುವ ಶೀರ್ಷಿಕೆಗಳು ಹೆಚ್ಚಾಗಿ ಇಂಗ್ಲಿಷ್‌ನಲ್ಲಿಯೇ ಇರುತ್ತವೆ. ಭಾರತೀಯ ಭಾಷೆಗಳನ್ನು ಉತ್ತೇಜಿಸಲು ಈ ಶೀರ್ಷಿಕೆಗಳನ್ನು ಅವು ಪ್ರಸಾರಗೊಳ್ಳುವ ಭಾಷೆಯಲ್ಲಿಯೇ ಪ್ರದರ್ಶಿಸುವಂತೆ ಎಲ್ಲ ಟಿವಿ ವಾಹಿನಿಗಳಿಗೆ ಆದೇಶಿಸಲಾಗಿದೆ ಎಂದು ಶುಕ್ರವಾರ ಇಲ್ಲಿ ತಿಳಿಸಿದ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಅವರು, ವಾಹಿನಿಗಳು ಇಂಗ್ಲಿಷ್ ಶೀರ್ಷಿಕೆಗಳನ್ನೂ ಸೇರಿಸಲು ಸ್ವತಂತ್ರವಾಗಿವೆ. ನಾವು ಯಾವುದನ್ನೂ ನಿರ್ಬಂಧಿಸುತ್ತಿಲ್ಲ,ನಾವು ಭಾರತೀಯ ಭಾಷೆಗಳನ್ನು ಸೇರಿಸುತ್ತಿದ್ದೇವೆ. ಚಲನಚಿತ್ರಗಳಿಗೂ ಇಂತಹುದೇ ಆದೇಶಗಳನ್ನು ಹೊರಡಿಸಲಿದ್ದೇವೆ ಎಂದರು.

ಹಲವಾರು ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳ ವಾಹಿನಿಗಳು ಕಲಾವಿದರು,ನಿರ್ಮಾಣ ತಂಡದ ಹೆಸರುಗಳನ್ನು ಕೇವಲ ಇಂಗ್ಲಿಷ್‌ನಲ್ಲಿಯೇ ಪ್ರದರ್ಶಿಸುತ್ತಿವೆ. ಇದರಿಂದಾಗಿ ಇಂಗ್ಲಿಷ್ ಬಾರದವರು ಅಗತ್ಯ ಮಾಹಿತಿಗಳಿಂದ ವಂಚಿತರಾಗುತ್ತಾರೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News