​ಕಿಂಡಿ ಅಣೆಕಟ್ಟು ಕಳಪೆ ನಿರ್ವಹಣೆ; ಅಧಿಕಾರಿ ವಿರುದ್ಧ ಕ್ರಮಕ್ಕೆ ನಿರ್ಣಯ

Update: 2019-06-14 15:48 GMT

ಉಡುಪಿ, ಜೂ.14: ನೀಲಾವರ, ಉಗ್ಗೇಲ್‌ಬೆಟ್ಟು (ಉಪ್ಪೂರು) ಹಾಗೂ ನಾಗರಮಠ (ಬಾರಕೂರು)ಗಳಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟುಗಳನ್ನು ನಿರ್ವಹಿಸದೇ ಜನರಿಗೆ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣರಾದ ಸಂಬಂಧಿತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಇಂದಿಲ್ಲಿ ನಡೆದ ಉಡುಪಿ ತಾಲೂಕು ಪಂಚಾಯತ್‌ನ 18ನೇ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

ಉಡುಪಿ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂರು ಕಿಂಡಿ ಅಣೆಕಟ್ಟುಗಳಿಂದ ಪರಿಸರದ ಜನರಿಗಾದ ಸಮಸ್ಯೆಗಳನ್ನು ಅಲ್ಲಿನ ಸದಸ್ಯರು ಸಭೆಯ ಗಮನಕ್ಕೆ ತಂದ ಬಳಿಕ ಸಭೆಗೆ ಗೈರುಹಾಜರಾದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸಭೆಗೆ ಬರಲು ಸೂಚನೆ ಕಳುಹಿಸಿದರೂ ಬಾರದ ಕಾರಣ ವಿಷಯದ ಕುರಿತು ಚರ್ಚಿಸಿದ ಸದಸ್ಯರು ಶಾಸಕರಾದ ಕೆ.ರಘುಪತಿ ಭಟ್ ಅವರ ಸಲಹೆಯಂತೆ ಸಂಬಂಧಿತ ಅಧಿಕಾರಿ ವಿರುದ್ಧ ಕ್ರಮಕ್ಕೆ ನಿರ್ಣಯ ಕೈಗೊಂಡಿತು.

ಸದಸ್ಯ ಉಮೇಶ್ ಶೆಟ್ಟಿ ಹಾಗೂ ಬಾರಕೂರು ಗ್ರಾಪಂ ಅಧ್ಯಕ್ಷೆ ಶೈಲಾ ಡಿಸೋಜ ಅವರು ನಾಗರಮಠ ಕಿಂಡಿ ಅಣೆಕಟ್ಟಿನ ಸಮಸ್ಯೆಯನ್ನು ತೆರೆದಿಟ್ಟರೆ, ನೀಲಾವರ ಹಾಗೂ ಉಗ್ಗೇಲ್‌ಬೆಟ್ಟು ಅಣೆಕಟ್ಟಿನಿಂದ ಆಸುಪಾಸಿನ ಗ್ರಾಮಗಳ ರೈತರಿಗೆ ಹಾಗೂ ಜನರಿಗಾದ ಉಪ್ಪು ನೀರಿನ ಸಮಸ್ಯೆಯನ್ನು ಶಾಸಕರು ಸಭೆಯ ಗಮನಕ್ಕೆ ತಂದರು.

ಅಣೆಕಟ್ಟಿನ ಕಳಪೆ ನಿರ್ವಹಣೆಯಿಂದ ಕೃತಕ ಸಮಸ್ಯೆಗಳು ಸೃಷ್ಟಿಯಾಗಿವೆ. ಉಪ್ಪು ನೀರು ಬಂದು ಪರಿಸರದಲ್ಲಿ ಕೃಷಿ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಅಣೆಕಟ್ಟಿಗೆ ಹಲಗೆ ಹಾಕುವಲ್ಲಿ ತೋರುತ್ತಿರುವ ನಿರ್ಲಕ್ಷದಿಂದ ಸಮಸ್ಯೆಗಳಾಗುತ್ತಿದೆ. ಇದನ್ನು ಅಕ್ಟೋಬರ್ ತಿಂಗಳಲ್ಲಿ ಹಾಕದೇ ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಹಾಕಲಾಗುತ್ತಿದೆ. ಹಲಗೆಗಳೂ ಸರಿಯಾದ ಅಳತೆಯಲ್ಲಿಲ್ಲ. ಮಣ್ಣನ್ನು ಸಹ ಸಮರ್ಪಕವಾಗಿ ಹಾಕಲಾಗುತ್ತಿಲ್ಲ. ಇದರಿಂದ ಎಲ್ಲಾ ಸಮಸ್ಯೆಗಳುಂಟಾಗುತ್ತಿವೆ ಎಂದು ಸದಸ್ಯರು ದೂರಿದಾಗ, ಆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ನಿರ್ಣಯ ಮಾಡೊೀಣ ಎಂದು ಶಾಸಕ ಭಟ್ ಹೇಳಿದರು.

ನರೇಗಾ ಯೋಜನೆಯಡಿ ಕೃಷಿಬಾವಿ ನಿರ್ಮಾಣಕ್ಕೆ ಕನಿಷ್ಠ 50 ಸೆನ್ಸ್ ಜಾಗ ಬೇಕು ಎಂಬ ಜಿಪಂನ ಸುತ್ತೋಲೆಗೆ ತಾಪಂ ಸದಸ್ಯರು ವಿರೋಧ ಸೂಚಿಸಿದರು. ಇಲ್ಲಿ 5-10 ಸೆನ್ಸ್ ಜಾಗದಲ್ಲಿ ಮನೆ ನಿರ್ಮಿಸಿದವರು ಮಲ್ಲಿಗೆ ಕೃಷಿ, 5-6 ತೆಂಗಿನ ಮರ ನೆಡುತ್ತಾರೆ. ಅವರಿಗೆ ಕೃಷಿ ಬಾವಿ ನೀಡಬೇಕು. ನರೇಗಾದಲ್ಲಿ ಇಲ್ಲದ ವಿಷಯಗಳನ್ನು ಎತ್ತಿ ಜನರಿಗೆ ತೊಂದರೆಯನ್ನುಂಟು ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ರಘುಪತಿ ಭಟ್ ಈ ಬಗೆ ತಾನು ಜಿಪಂ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸುುದಾಗಿ ಸಭೆಗೆ ಆಶ್ವಾಸನೆ ನೀಡಿದರು.

ಗಂಗಾ ಕಲ್ಯಾಣ ಯೋಜನೆಯ ಬಗ್ಗೆ ಫಲಾನುಭವಿಗಳಿಗೆ ಸಂಬಂಧಪಟ್ಟ ಇಲಾಖೆ ಸರಿಯಾದ ಮಾಹಿತಿ ಸದಸ್ಯೆ ಡಾ.ಸುನಿತಾ ಶೆಟ್ಟಿ ಒತ್ತಾಯಿಸಿದರು. ಕೆಲವು ಬೋರ್‌ವೆಲ್‌ಗಳಿಗೆ ಎರಡು ವರ್ಷವಾದರೂ ಮೀಟರ್ ಅಳವಡಿಕೆಯಾಗಿಲ್ಲ ಎಂದವರು ಹೇಳಿದರು. ಇಲಾಖೆಯಿಂದ ಕೇವಲ 1.5 ಲಕ್ಷ ರೂ.ನೀಡಲಾಗುತಿದ್ದು, ಕಡಿಮೆ ಬಿದ್ದ ಹಣವನ್ನು ಫಲಾನುಭವಿಗಳೇ ನೀಡಬೇಕು ಎಂದು ಅಧಿಕಾರಿ ನುಡಿದರು. ಇದನ್ನು ನೀವು ಯೋಜನೆ ಮಂಜೂರುಗೊಳಿಸುವಾಗಲೇ ಫಲಾನುಭವಿಗಳಿಗೆ ತಿಳಿಸಬೇಕು. ಈಗ ಹಣ ನೀಡಲು ಅವರ ಬಳಿ ದುಡ್ಡಿಲ್ಲ ಎಂದು ಡಾ.ಸುನಿತಾ ಶೆಟ್ಟಿ ಹೇಳಿದರು.

ಸಂಧ್ಯಾ ಸುರಕ್ಷಾ ವಿಧವಾ ವೇತನ, ವೃದ್ಧಾಪ್ಯ ವೇತನ ಹಾಗೂ ಅಂಗವಿಕಲ ವೇತನ ಪಿಂಚಣಿಯ ಬಗ್ಗೆ ಫಲಾನುಭವಿಗಳಿಗೆ ಆರೇಳು ತಿಂಗಳಿನಿಂದ ಬರುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ ಎಂದು ಡಾ.ಸುನೀತಾ ಶೆಟ್ಟಿ ಹಾಗೂ ಶಾಸಕ ರಘುಪತಿ ಭಟ್ ಹೇಳಿದರು. ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಟ್ರಜರಿ ಸಾಪ್ಟ್‌ವೇರ್ ಸಮಸ್ಯೆಯಿದೆ ಇಂದರು. ಸಮಸ್ಯೆ ಕುರಿತು ಮೂರು ತಾಲೂಕುಗಳ ತಹಶೀಲ್ದಾರರು ಹಾಗೂ ಖಜಾನೆ ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸುವಂತೆ ಶಾಸಕರು ಸೂಚಿಸಿದರು.

ಬ್ರಹ್ಮಾವರ ಉಪನೋಂದಾವಣಾಧಿಕಾರಿಗಳ ಕಚೇರಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆದಾಗ ಈ ಕಚೇರಿಗೆ ಮಿನಿ ವಿಧಾನಸೌಧದಲ್ಲಿ ಸ್ಥಳಾವಕಾಶ ನೀಡಲಾಗುವುದು ಎಂದು ಶಾಸಕರು ಸಭೆಗೆ ತಿಳಿಸಿದರು.ವಿಕಲಚೇತನರಿಗೆ ಬಸ್ ಪಾಸ್ ಮಾಡಿಸಲು ಮಂಗಳೂರಿಗೆ ಹೋಗಬೇಕಾಗಿದೆ ಎಂದು ಸದಸ್ಯರು ದೂರಿದರು.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ರಾಜು ತಿಳಿಸಿದರು.

ಕುದಿ ಗ್ರಾಮದ ಕೆಲವು ಫಲಾನುಭವಿಗಳಿಗೆ ಹಕ್ಕುಪತ್ರವಿದ್ದು ನಕ್ಷೆ ದೊರಕುತ್ತಿಲ್ಲ ಎಂದು ಸದಸ್ಯ ಲಕ್ಷ್ಮೀನಾರಾಯಣ ಪ್ರಭು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ತಾಪಂನಲ್ಲಿ ಮಿಸ್ಸಿಂಗ್ ಫೈಲ್ ವರದಿ ಮಾಡಿ ನಂತರ ಎಡಿಎಲ್ಆರ್ ರಿಂದ ಸರ್ವೇ ಮಾಡಿ ನಕ್ಷೆ ಮಾಡಿಕೊಡುವಂತೆ ಶಾಸಕರು ತಿಳಿಸಿದರು.
ಸಭೆಯ ಆರಂಭದಲ್ಲಿ ಸಮಾಜಕಲ್ಯಾಣ ಇಲಾಖೆಯಿಂದ ಆಯ್ಕೆ ಮಾಡಲಾದ 15 ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ತಾಲೂಕು ಪಂಚಾಯತ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಎಸ್.ಹರಿಕೃಷ್ಣ ಶಿವತ್ತಾಯರನ್ನು ಸಭೆಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.

ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದಬೆಟ್ಟು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಭುಜಂಗ ಶೆಟ್ಟಿ, ಉಡುಪಿ ಇಒ ಕೆ.ರಾಜು, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಕಾಪು ತಹಶೀಲ್ದಾರ್ ಸಂತೋಷ್‌ಕುಮಾರ್ ಉಪಸ್ಥಿತರಿದ್ದರು.

ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಪ್ರತ್ಯೇಕಕ್ಕೆ ನಿರ್ಣಯ
ಆರೋಗ್ಯ ಕರ್ನಾಟಕದಲ್ಲಿ ಸರಕಾರಿ ವೈದ್ಯರ ಶಿಫಾರಸ್ಸಿನ ಮೇರೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಿಂದ ಜನರಿಗೆ ಗೊಂದಲ ಉಂಟಾ ಗುತ್ತಿದೆ. ತಮ್ಮ ಇಚ್ಛೆಯಂತೆ ಆರೋಗ್ಯ ಸೇವೆ ಪಡೆಯಲು ತೊಡಕಾಗುತ್ತಿದೆ. ಆದರೆ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಯಾವುದೇ ಗೊಂದಲಗಳು ಇಲ್ಲದಿರುವುದರಿಂದ ರಾಜ್ಯದಲ್ಲಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಪ್ರತ್ಯೇಕಗೊಳಿಸಲು ಸರಕಾರವನ್ನು ಆಗ್ರಹಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ಹೇಳಿದರು. ಇದಕ್ಕೆ ತಾಪಂ ಸದಸ್ಯರು ಸಹಮತ ವ್ಯಕ್ತಪಡಿ ಸಿದ್ದು, ಅದೇ ರೀತಿ ನಿರ್ಣಯ ಕೈಗೊಳ್ಳಲಾಯಿತು.

ವಿಷಯ ಪ್ರಸ್ತಾಪಿಸಿದ ಸದಸ್ಯೆ ಸುನೀತಾ ಶೆಟ್ಟಿ, ಹೆರಿಗೆ ಸಂದರ್ಭದಲ್ಲಿ ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಸರಕಾರಿ ವೈದ್ಯರು ಶಿಫಾರಸ್ಸು ಮಾಡುತ್ತಿದ್ದಾರೆ. ಇದರಿಂದ ಬಡಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು. ಇದಕ್ಕೆ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ನಾಗರತ್ನಾ, ಹೆರಿಗೆಗೆ ಆಯುಷ್ಮಾನ್-ಆರೋಗ್ಯ ಕರ್ನಾಟಕ ಯೋಜನೆ ಅನ್ವಯವಾಗುವುದಿಲ್ಲ. ಇದನ್ನು ಸರಕಾರಿ ಆಸ್ಪತ್ರೆುಲ್ಲೇ ಮಾಡಿಕೊಳ್ಳಬೇಕು ಎಂದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕ ಭಟ್, ಉಡುಪಿಯ ಸರಕಾರಿ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ಸಾಧ್ಯವಿಲ್ಲವಾದರೆ ವೆನ್ಲಾಕ್‌ಗೆ ಬರೆದುಕೊಡುತ್ತಿದ್ದಾರೆ. ಆಸ್ಪತ್ರೆ ಸುಸಜ್ಜಿತವಾಗಿದ್ದರೂ ಹೆಚ್ಚಿನ ವೈದ್ಯಕೀಯ ಸವಲತ್ತುಗಳಿಲ್ಲ. ಆಡಳಿತ ಸಮಿತಿಯಲ್ಲಿ ಜನಪ್ರತಿನಿಧಿಗಳಿಲ್ಲ. ಹೀಗಾಗಿ ಜನರ ಸಮಸ್ಯೆ ಅವರಿಗೆ ಆರ್ಥವಾಗುತ್ತಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಸರಕಾರಿ ವೈದ್ಯರ ಶಿಫಾರಸ್ಸಿಲ್ಲದೆ ಬಡವರು ಯೋಜನೆ ವ್ಯಾಪ್ತಿಗೆ ಒಳಪಟ್ಟ ಯಾವುದೇ ಆಸ್ಪತ್ರೆಯಲ್ಲಿ ನೇರವಾಗಿ ಚಿಕಿತ್ಸೆ ಪಡೆಯಬಹುದು. ಆದ್ದರಿಂದ ಇವೆರಡನ್ನೂ ಪ್ರತ್ಯೇಕಗೊಳಿಸುವಂತೆ ಮುಂದಿನ ಅಧಿವೇಶನದಲ್ಲಿ ಆಗ್ರಹಿುವುದಾಗಿ ರಘುಪತಿ ಭಟ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News