ಗ್ರಾಪಂಗಳಲ್ಲಿ ಇನ್ನು ತ್ರೈಮಾಸಿಕ ಪರಿಶೀಲನಾ ಸಮಿತಿ ಸಭೆ

Update: 2019-06-15 04:56 GMT

ಮಂಗಳೂರು, ಜೂ.15: ಅಧಿಕಾರ ವಿಕೇಂದ್ರೀಕರಣದ ಮೂಲಕ ಪಂಚಾಯತ್‌ಗಳಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಅಧಿಕಾರವನ್ನು ವರ್ಗಾಯಿಸಲಾಗಿರುವಂತೆಯೇ ಇದೀಗ ಗ್ರಾಮ ಪಂಚಾಯತ್ ಮಟ್ಟಗಳಲ್ಲಿಯೂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಮಿತಿ ಸಭೆ ನಡೆಸಲು ಸರಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂ ಮಟ್ಟದಲ್ಲು ಪ್ರಗತಿ ಪರಿಶೀಲನಾ ಸಮಿತಿ ರಚನೆಗೆ ಸಂಬಂಧಿಸಿ ಕರ್ನಾಟಕ ರಾಜ್ಯ ಸರಕಾರ ಆದೇಶವನ್ನು ಹೊರಡಿಸಿದೆ.

ಸದ್ಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದಡಿ (20 ಅಂಶ ಕಾರ್ಯಕ್ರಮ ಸೇರಿದಂತೆ) ಸಾಧಿಸಲಾದ ಪ್ರಗತಿಯನ್ನು ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆ ಹಾಗೂ ತಾಲೂಕು ಮಟ್ಟದಲ್ಲಿ ವಿಧಾನಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಮಿತಿ ರಚಿಸಲಾಗಿದ್ದು, ತ್ರೈಮಾಸಿಕ ಸಭೆಗಳನ್ನು ನಡೆಸಲಾಗುತ್ತಿದೆ. ಇದೇ ರೀತಿಯಲ್ಲಿ ಇನ್ನು ಗ್ರಾಪಂ ಮಟ್ಟದಲ್ಲೂ ಸಮಿತಿ ರಚನೆಯಾಗಿ ತ್ರೈಮಾಸಿಕ ಸಭೆ (ಕೆಡಿಪಿ) ನಡೆಯಲಿದೆ.

ಸಂವಿಧಾನದ 73ನೇ ತಿದ್ದುಪಡಿಯ ಆಶೋತ್ತರಗಳಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಗಳನ್ನು ಪಂಚಾಯತ್‌ರಾಜ್ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಅನುದಾನ ಚಟುವಟಿಕೆ ಹಾಗೂ ಅಧಿಕಾರಿಗಳನ್ನು ಮೂರು ಸ್ಥರದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಅಭಿವೃದ್ಧಿ ಯೋಜನೆಗಳಡಿ ಬಿಡುಗಡೆಗೊಳಿಸುತ್ತಿರುವ ಅನು ದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕಾರ್ಯ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿವೆ.

ಕರ್ನಾಟಕ ರಾಜ್ಯ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 309 ಮತ್ತು 310ರ ಅನ್ವಯ ಸರಕಾರ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್‌ಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಕ್ರಿಯಾ ಯೋಜೆಯ ಕರಡನ್ನು ಸಿದ್ಧಪಡಿಸಲು ಪ್ರತಿಯೊಂದು ಜಿಲ್ಲೆಗೂ ಪ್ರತ್ಯೇಕ ಜಿಲ್ಲಾ ಯೋಜನಾ ಸಮಿತಿ, ಪ್ರತಿ ತಾಲೂಕಿಗೂ ತಾಲೂಕು ಯೋಜನಾ ಸಮಿತಿ ಹಾಗೂ ಅಭಿವೃದ್ಧಿ ಸಮಿತಿಗಳನ್ನು ರಚಿಸಿದೆ. ಇದೇ ರೀತಿಯಲ್ಲ ಇದೀಗ ಗ್ರಾಪಂ ಮಟ್ಟದಲ್ಲೂ ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನ, ಯೋಜನೆಗಳ ಕುರಿತಂತೆ ಪ್ರಗತಿ ಪರಿಶೀಲನೆ ನಡೆಸುವುದು ಅಗತ್ಯವಾಗಿದೆ.

ಗ್ರಾಪಂ ಕೆಡಿಪಿ ಪರಿಶೀಲನಾ ಸಮಿತಿಯು ಗ್ರಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ತ್ರೈ ಮಾಸಿಕವಾಗಿ (ಎಪ್ರಿಲ್, ಜುಲೈ, ಅಕ್ಟೋಬರ್, ಡಿಸೆಂಬರ್) ಮೊದಲನೇ ವಾರದಲ್ಲಿ ಸಭೆ ಸೇರಲಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯಡಿ ಗ್ರಾಪಂಗಳು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಬಗ್ಗೆ ಈ ಸಭೆಯಲ್ಲಿ ಪರಿಶೀಲನೆ ನಡೆಯಲಿದೆ. ಎಲ್ಲಾ ಜಿಲ್ಲಾಧಿಕಾರಿ ಗಳು, ಜಿಪಂ ಸಿಇಒ, ತಾಪಂ ಇಒ ಹಾಗೂ ಎಲ್ಲಾ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳಿಗೆ ಈ ಸಂಬಂಧ ಸರಕಾರದ ಆದೇಶದ ಪ್ರತಿಯನ್ನು ಕಳುಹಿಸಲಾಗಿದೆ.

ಗ್ರಾಪಂ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಪರಿಶೀಲನಾ ಸಮಿತಿಯು ತ್ರೈಮಾಸಿಕವಾಗಿ ತಿಳಿಸಲಾದ ತಿಂಗಳುಗಳ ಮೊದಲ ವಾರದಲ್ಲಿ ಸಭೆ ಸೇರಬೇಕಾಗಿದೆ.ಒಂದು ವೇಳೆ ಸಭೆಗೆ ಗ್ರಾಪಂ ಅಧ್ಯಕ್ಷರು ಗೈರು ಹಾಜರಾಗಿದ್ದಲ್ಲಿ ಗ್ರಾಪಂ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆ ಸತಕ್ಕದ್ದು. ಈ ಇಬ್ಬರೂ ಗೈರಾಗಿದ್ದಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕಿದೆ. ಸದಸ್ಯ ಕಾರ್ಯದರ್ಶಿಗಳು ಪ್ರತಿ ತ್ರೈಮಾಸಿಕಕ್ಕೆ ಒಂದು ಸಭೆ ನಡೆಸಲು ಕ್ರಮ ವಹಿಸಬೇಕು. ಸಭೆಯ ದಿನಾಂಕವನ್ನು ಗ್ರಾಪಂ ಅಧ್ಯಕ್ಷರಿಂದ ಪಡೆದು ಒಂದು ವಾರ ಮುಂಚಿತವಾಗಿ ಸಮಿತಿ ಸದಸ್ಯರಿಗೆ ತಿಳುವಳಿಕೆ ಸೂಚನೆ ನೀಡಬೇಕಿದೆ. ಸಂಬಂಧಪಟ್ಟ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟಂತೆ ಹೋಬಳಿ, ಗ್ರಾಪಂ ಮಟ್ಟದ ಅಧಿಕಾರಿ, ಸಿಬ್ಬಂದಿಯನ್ನು ಗ್ರಾಪಂ ಕೆಡಿಪಿ ಸಭೆಗೆ ಹಾಜರಾಗಲು ನಿರ್ದಿಷ್ಟಗೊಳಿಸಿ ಆದೇಶ ಹೊರಡಿಸಬೇಕು ಎಂದು ಸರಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. 

ಗ್ರಾಪಂ ಅಧ್ಯಕ್ಷರು ಸಮಿತಿಗೆ ಅಧ್ಯಕ್ಷರಾಗಿದ್ದರೆ, ಉಪಾಧ್ಯಕ್ಷರು ಸಮಿತಿಯ ಉಪಾಧ್ಯಕ್ಷತೆ ವಹಿಸಲಿದ್ದಾರೆ. ಗ್ರಾಪಂನ ಎಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷರು ಸಮಿತಿಯಲ್ಲಿ ಸದ್ಯರಾಗಿದ್ದರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ. ಉಳಿದಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ, ಪಶು ಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ, ಸಣ್ಣ ನೀರಾವರಿ, ಗ್ರಾಮೀಣ ರಸ್ತೆ, ಸೇತುವೆ, ಇಂಧನ ಇಲಾಖೆ, ಕಂದಾಯ ಇಲಾಖೆ, ಕುಡಿಯುವ ನೀರು, ಸಹಕಾರ, ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ಸುಮಾರು 30ಕ್ಕೂ ಅಧಿಕ ಇಲಾಖೆಗಳ ಹೋಬಳಿ, ಗ್ರಾಪಂ ಮಟ್ಟದ ಅಧಿಕಾರಿ, ಸಿಬ್ಬಂದಿ ಸಮಿತಿಯಲ್ಲಿ ಆಹ್ವಾನಿತರಾಗಿರುತ್ತಾರೆ.

ಸಭೆಯ ನಂತರ ಸಭಾ ನಡವಳಿಗಳನ್ನು 3 ದಿನ ದೊಳಗೆ ಸಿದ್ಧಪಡಿಸಿ ಸಂಬಂಧಪಟ್ಟ ಎಲ್ಲಾ ಸದಸ್ಯರಿಗೆ, ತಾಲೂಕು ಮಟ್ಟದ ಇಲಾಖೆಯ ಮುಖ್ಯಸ್ಥರಿಗೆ, ಆಹ್ವಾನಿತರಿಗೆ ಅಗತ್ಯ ಕ್ರಮಕ್ಕಾಗಿ ಪಿಡಿಒ ಕಳುಹಿಸಬೇಕಿದೆ. ಬಳಿಕ ಕೈಕೊಂಡ ಅನು ಪಾಲನಾ ವರದಿ ಪಡೆದು ಮುಂದಿನ ಸಭೆಯಲ್ಲಿ ಮಂಡಿಸಿ ಚರ್ಚಿಸಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು.


ಸಭೆಯಲ್ಲಿ ಚರ್ಚೆಯಾಗಲಿರುವ ವಿಷಯಗಳು
ಗ್ರಾಪಂ ಮಟ್ಟದಲ್ಲಿ ಬಡತನ ನಿರ್ಮೂಲನೆ, ಮಕ್ಕಳ ಹಾಗೂ ಗರ್ಭಿಣಿಯರ ಆರೋಗ್ಯಕ್ಕಾಗಿ ಪೌಷ್ಠಿಕಾಂಶ ಒದಗಿಸುವ ಕಾರ್ಯಕ್ರಮಗಳ ಅನುಷ್ಠಾನ, ಮಕ್ಕಳ ಹಾಗೂ ಮಹಿಳೆಯರ ಆರೋಗ್ಯ, ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಪಡಿತರ ಧಾನ್ಯಗಳ ಸಮರ್ಪಕ ವಿತರಣೆ ಕುರಿತಂತೆ ಪ್ರಗತಿ ಪರಿಶೀಲನೆ ಈ ಸಭೆಯಲ್ಲಿ ನಡೆಯಲಿದೆ. ಗ್ರಾಮದ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಮತ್ತು ತರಗತಿಗಳ ನಿರ್ವಹಣೆಯ ಬಗ್ಗೆ ಕೃಷಿ, ತೋಟಗಾರಿಕೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಕಾರ್ಯಚಟುವಟಿಕೆಗಳ ಅನುಷ್ಠಾನ ಹಾಗೂ ಸಾಧಿಸಿರುವ ಪ್ರಗತಿ ಪರಿಶೀಲನೆ ನಡೆಸಲಿದೆ.


ಗ್ರಾಪಂ ಮಟ್ಟದಲ್ಲಿ ಗ್ರಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಮಿತಿಯನ್ನು ರಚಿಸಲು ಸರಕಾರವು ತೀರ್ಮಾನಿಸಿದ್ದು, ಮುಂದಿನ ತಿಂಗಳಿನಿಂದ ಇದು ಜಾರಿಗೆ ಬರಲಿದೆ. ತ್ರೈಮಾಸಿಕವಾಗಿ ಈ ಸಮಿತಿಯ ಸಭೆ ನಡೆಯಲಿದೆ.
 -ಕೆ.ಯಾಲಕ್ಕಿ ಗೌಡ
ನಿರ್ದೇಶಕರು (ಪಂ ರಾಜ್-1) ಗ್ರಾಮೀಣಾಭಿವೃದ್ಧಿ, ಪಂ.ರಾಜ್ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News