ಆಳ್ವಾಸ್ ಕಾಲೇಜಿಗೆ ನ್ಯಾಕ್ ಎ ಗ್ರೇಡ್ ಮಾನ್ಯತೆ

Update: 2019-06-15 05:31 GMT

ಮೂಡುಬಿದಿರೆ, ಜೂ.15: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಮುಖ ಶಿಕ್ಷಣ ಸಂಸ್ಥೆಯಾಗಿರುವ ಆಳ್ವಾಸ್ ಕಾಲೇಜಿಗೆ ಯುಜಿಸಿ ನ್ಯಾಕ್ ಸಂಸ್ಥೆಯು ಎ ಗ್ರೇಡ್ ಮಾನ್ಯತೆ ನೀಡಿದ್ದು, ಹೊಸ ಮಾನ್ಯತಾ ಕ್ರಮದಲ್ಲಿ ಸಿಜಿಪಿಎ 3.23 ಪಡೆದಿರುವುದು ವಿಶೇಷವಾಗಿದೆ. ಈ ಮಾನ್ಯತೆ ಮುಂದಿನ 5 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ.

ಎ ಗ್ರೇಡ್ ಮಾನ್ಯತೆಯಿಂದ ಸಂಶೋಧನಾ ಕಾರ್ಯಚಟುವಟಿಕೆಗಳಿಗೆ ಸಹಕಾರಿಯಾಗಲಿದ್ದು, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತದೆ. ಜೊತೆಯಲ್ಲಿ ವಿಶ್ವದ ಪ್ರಮುಖ ಸಂಸ್ಥೆಗಳೊಂದಿಗೆ ಶೈಕ್ಷಣಿಕ-ಔದ್ಯಮಿಕ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ರಹದಾರಿಯಾಗಲಿದೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ಉದ್ಯಮ ವಲಯಕ್ಕೆ ಅವಶ್ಯಕವಾದ ವೃತ್ತಿಪರ ತರಬೇತಿ ಪಡೆದು, ಜಾಗತಿಕ ಸ್ತರದ ಉದ್ಯೋಗ ಪಡೆಯಲು ವೇದಿಕೆಯನ್ನು ನಿರ್ಮಿಸಿದಂತಾಗುತ್ತದೆ.

ಪಠ್ಯಕ್ರಮ, ಶೈಕ್ಷಣಿಕ ಕಾರ್ಯಚಟುವಟಿಕೆ, ಸಂಶೋಧನೆ, ವಿಸ್ತರಣಾ ಕಾರ್ಯಕ್ರಮಗಳು, ಮೂಲಭೂತ ಸೌಕರ್ಯಗಳು, ಕಲಿಕಾ ಸಂಪನ್ಮೂಲ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ, ಆಡಳಿತ, ನಾಯಕತ್ವ, ನಿರ್ವಹಣೆ ಹಾಗೂ ವ್ಯಕ್ತಿಗತ ಮೌಲ್ಯಗಳು ಮತ್ತು ಅತ್ಯುತ್ತಮ ಕೆಲಸಗಳನ್ನು ಮೌಲ್ಯಮಾಪನ ಮಾಡಿ ಮಾನ್ಯತೆಯನ್ನು ಎರಡನೆಯ ಅವಧಿಗೆ ನೀಡಲಾಗಿದೆ. ನ್ಯಾಕ್ ತಂಡ ಮೌಲ್ಯಮಾಪನಕ್ಕಾಗಿ ಮೇ 21 ಮತ್ತು 22ರಂದು ಆಳ್ವಾಸ್ ಕಾಲೇಜಿಗೆ ಭೇಟಿ ನೀಡಿತ್ತು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News