ಸಮಾಜಕ್ಕೆ ರಚನಾತ್ಮಕ ಕೊಡುಗೆ ನೀಡುವವರಾಗಿ: ವಿದ್ಯಾರ್ಥಿಗಳಿಗೆ ಡಾ.ಪಿ.ಎಸ್.ಯಡಪಡಿತ್ತಾಯ ಕರೆ

Update: 2019-06-15 15:02 GMT

ಮಂಗಳೂರು, ಜೂ.15: ಸಮಾಜಕ್ಕೆ ರಚನಾತ್ಮಕವಾದ ಉತ್ತಮ ಕೊಡುಗೆ ನೀಡುವ ಪದವೀಧರರಾಗಿ ಎಂದು ಯುವ ಇಂಜಿನಿಯರಿಂಗ್ ಪದವೀಧರರಿಗೆ ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ಕರೆ ನೀಡಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿಂದು ಆಯೋಜಿಸಲಾಗಿದ್ದ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ)ಯ 7ನೇ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಬಿಐಟಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಸೈಯದ್ ಮುಹಮ್ಮದ್ ಬ್ಯಾರಿ ದೂರದೃಷ್ಟಿಯುಳ್ಳ ಅಭಿವೃದ್ಧಿ ಚಿಂತಕ ಎಂದ ಡಾ.ಪಿ.ಎಸ್.ಯಡಪಡಿತ್ತಾಯ, ಮಂಗಳೂರು ವಿವಿ ಹಾಗೂ ಬಿಐಟಿ ನಡುವೆ ಅನ್ಯೋನ್ಯ ಬಾಂಧವ್ಯವಿದೆ. ಮುಂದಿನ ದಿನಗಳಲ್ಲಿ ಬಿಐಟಿ ಜೊತೆ ಮಂಗಳೂರು ವಿವಿ ಹಲವು ಕಾರ್ಯಕ್ರಮ, ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದರು.

ಪ್ರಧಾನ ಭಾಷಣಕಾರರಾಗಿ ಭಾಗವಹಿಸಿದ್ದ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್‌ನ ನಿರ್ದೇಶಕರ ಸಲಹೆಗಾರರಾದ ಪ್ರೊ. ಬಿ.ಎನ್.ರಘುನಂದನ್ ಮಾತನಾಡಿ, ಪದವಿ ಪಡೆದ ಯುವ ಇಂಜಿನಿಯರ್ ಗಳು ನಿರಂತರ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕಾದ ಅಗತ್ಯವಿದೆ ಎಂದರು.

ಜ್ಞಾನ ಸಂಪಾದನೆ ನಿರಂತರ ಪ್ರಕ್ರಿಯೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವ ಇಂಜಿನಿಯರ್‌ಗಳು ಜಗತ್ತಿನ ವಿವಿಧ ದೇಶಗಳ ಜೊತೆ ಸ್ಪರ್ಧಿಸಬೇಕಾಗಿದೆ. ಅದಕ್ಕಾಗಿ ಜ್ಞಾನ ಸಂಪಾದನೆ ಮತ್ತು ನವೀಕರಣದ ಅಗತ್ಯವಿದೆ. ಇತರ ಕಡೆಗಳಿಂದ ಪಡೆಯುವ ಪ್ರೇರಣೆಗಳಿಂದ ಸ್ವಯಂಪ್ರೇರಣೆ ಮುಖ್ಯ ಎಂದವರು ಅಭಿಪ್ರಾಯಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್‌ನ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡುತ್ತಾ, ನಮ್ಮ ಮಾತು, ಕೃತಿ, ಚಿಂತನೆಗಳಲ್ಲಿ ಸತ್ಯನಿಷ್ಠೆ, ನಮ್ಮ ಕುಟುಂಬ, ಸಮಾಜ, ದೇವರು, ಜೊತೆಗೆ ನಮ್ಮ ಬಗ್ಗೆ ನಮಗಿರುವ ನಂಬಿಕೆ ಹಾಗೂ ವ್ಯಕ್ತಿಗತವಾಗಿ ನಾವು ನಿರ್ವಹಿಸಬೇಕಾದ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಬದುಕಿನಲ್ಲಿ ತೃಪ್ತಿ, ಸಂತೋಷ ಹೊಂದಲು ಸಾಧ್ಯ ಎಂದರು.

ರೋಟರಿ ಫೌಂಡೇಶನ್‌ಗೆ 100 ಕೋಟಿ ರೂ. ದಾನ ನೀಡಿದ ಖ್ಯಾತಿಯ ರೋಟರಿಯನ್ ಹಾಗೂ ಕೊಡುಗೈ ದಾನಿ ರವಿಶಂಕರ್ ದಕೋಜು ವಿದ್ಯಾರ್ಥಿಗಳಿಗೆ ಪ್ರೇರಣಾ ಭಾಷಣ ಮಾಡಿದರು.

ಸಮಾರಂಭದಲ್ಲಿ ಬಿಐಟಿ ಪಾಲಿಟೆಕ್ನಿಕ್‌ನ ನಿರ್ದೇಶಕ ಡಾ.ಅಝೀಝ್ ಮುಸ್ತಫ,ಮಾಧ್ಯಮ ಸಂಪರ್ಕ ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ಲಾ ಗುಬ್ಬಿ, ಬಸವರಾಜ್, ಪುರುಷೋತ್ತಮ, ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಬಿಐಟಿ ಪ್ರಾಂಶುಪಾಲ ಡಾ.ಪಿ.ಮಹಾಬಲೇಶ್ವರಪ್ಪ ಸ್ವಾಗತಿಸಿದರು. ಡಾ. ಮುಸ್ತಫ ಬಸ್ತಿಕೋಡಿ ವಂದಿಸಿದರು. ಅಂಕಿತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News