ಯುವ ಇಂಜಿನಿಯರ್ ಗಳಿಗೆ ನಿರಂತರ ಕಲಿಕೆ ಅಗತ್ಯ: ಪ್ರೊ.ಬಿ.ಎನ್.ರಘುನಂದನ್

Update: 2019-06-15 08:22 GMT

ಮಂಗಳೂರು, ಜೂ.15: ಪದವಿ ಪಡೆದ ಯುವ ಇಂಜಿನಿಯರ್ ಗಳು ನಿರಂತರ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕಾದ ಅಗತ್ಯವಿದೆ ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ನ ನಿರ್ದೇಶಕರ ಸಲಹೆಗಾರ ಪ್ರೊ.ಬಿ.ಎನ್ .ರಘುನಂದನ್ ಅಭಿಪ್ರಾಯಿಸಿದ್ದಾರೆ. 

     ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿಂದು ನಡೆದ ಬ್ಯಾರೀಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಬಿಐಟಿ)ಯ 7ನೇ ಪದವಿ ಪ್ರದಾನ ಸಮಾರಂಭದ ಪ್ರದಾನ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
    ಜ್ಞಾನ ಸಂಪಾದನೆ ನಿರಂತರ ಪ್ರಕ್ರಿಯೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವ ಇಂಜಿನಿಯರ್ ಗಳು ಜಗತ್ತಿನ ವಿವಿಧ ದೇಶಗಳ ಜೊತೆ ಸ್ಪರ್ಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬದಲಾಗುತ್ತಿರುವ ಜಗತ್ತಿನ ಅಗತ್ಯಗಳಿಗೆ ಪೂರಕವಾಗಿ ಸ್ಪಂದಿಸಬೇಕಾಗಿದೆ. ಅದಕ್ಕಾಗಿ ಜ್ಞಾನ ಸಂಪಾದನೆ ಮತ್ತು ನವೀಕರಣದ ಅಗತ್ಯವಿದೆ. ಇತರ ಕಡೆಗಳಿಂದ ಪಡೆಯುವ ಪ್ರೇರಣೆಗಳಿಂದ ಸ್ವಯಂಪ್ರೇರಣೆ ಮುಖ್ಯ ಎಂದರು.
ನಮೆಲ್ಲರಿಗೂ ಇರುವ ಒಂದು ಜಗತ್ತನ್ನು, ಅಲ್ಲಿನ ಪರಿಸರವನ್ನು ಕಸಕಡ್ಡಿಗಳಿಂದ ಮಲಿನಗೊಳಿಸದೆ ಮುಂದಿನ ಯುವ ಜನಾಂಗಕ್ಕೆ ಉಳಿಸುವ, ಸಂರಕ್ಷಣೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಜಗತ್ತಿಗೆ ಹೊಸ ರೂಪ ನೀಡುವ ಇಂಜಿನಿಯರ್ ಗಳ ಮೇಲೆ ಈ ಹೊಣೆಗಾರಿಕೆ ಹೆಚ್ಚಿದೆ ಎಂದು ರಘುನಂದನ್ ಹೇಳಿದರು.
ಸಮಾರಂಭದ ಅಧ್ಯಕ್ಷ ತೆ ವಹಿಸಿದ್ದ ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್ ನ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡುತ್ತಾ. ನಮ್ಮಬದುಕಿನಲ್ಲಿ ಮಾತು, ಕೃತಿ, ಚಿಂತನೆಗಳಲ್ಲಿ ಸತ್ಯನಿಷ್ಠೆ, ನಮ್ಮ ಕುಟುಂಬ, ಸಮಾಜ, ದೇವರು ಜೊತೆಗೆ ನಮ್ಮ ಬಗ್ಗೆ ನಮಗಿರುವ ನಂಬಿಕೆ ಹಾಗೂ ವ್ಯಕ್ತಿಗತವಾಗಿ ನಾವು ನಿರ್ವಹಿಸಬೇಕಾದ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಬದುಕಿನಲ್ಲಿ  ತೃಪ್ತಿ, ಸಂತೋಷ ಹೊಂದಲು ಸಾಧ್ಯ ಎಂದು ಯುವ ಪದವೀಧರರಿಗೆ ಶುಭ ಹಾರೈಸಿದರು.

ರೋಟರಿಯನ್  ರವಿಶಂಕರ್ ದಕೋಜು ವಿದ್ಯಾರ್ಥಿಗಳಿಗೆ ಪ್ರೇರಣಾ ಭಾಷಣದಲ್ಲಿ, ದೇಶ, ಭಾಷೆ, ಗಡಿಗಳನ್ನು ಮೀರಿ ನಾವೆಲ್ಲರೂ ಒಂದಾಗಿ ಬೆಳೆಯಬೇಕಾಗಿದೆ. ನಮ್ಮ ಸ್ವಾರ್ಥದಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗಿದೆ, ಅದನ್ನು ನಾವೇ ಸರಿಪಡಿಸಬೇಕಾಗಿದೆ. ಆಗ ಜಗತ್ತು ಸುಂದರವಾಗಿರಲು ಸಾಧ್ಯ ಎಂದರು.

ಸಮಾರಂಭದಲ್ಲಿ ಬಿಐಟಿ ಪಾಲಿಟೆಕ್ನಿಕ್ ನ ನಿರ್ದೇಶಕ ಡಾ.ಅಝೀಝ್ ಮುಸ್ತಫ, ಬಿಐಟಿ ಮಾಧ್ಯಮ ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ಲಾ ಗುಬ್ಬಿ ಹಾಗೂ ವಿವಿಧ ವಿಭಾಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಬಿಐಟಿ ಪ್ರಾಂಶುಪಾಲ ಡಾ.ಪಿ.ಮಹಾಬಲೇಶ್ವರಪ್ಪ ಸ್ವಾಗತಿಸಿದರು. ಡಾ.ಮುಸ್ತಫ ಬಸ್ತಿಕೋಡಿ ವಂದಿಸಿದರು. ಅಂಕಿತಾ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News