ವಿಮಾನ ನಿಲ್ದಾಣದಲ್ಲಿ ಚಂದ್ರಬಾಬು ನಾಯ್ಡುರನ್ನು ತಪಾಸಣೆ ನಡೆಸಿದ ಸಿಬ್ಬಂದಿ

Update: 2019-06-15 10:14 GMT

ಹೈದರಾಬಾದ್, ಜೂ.15: ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಗೂ ಆಂಧ್ರ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ದಯನೀಯ ಸೋಲು ಕಂಡ ಬಳಿಕ ಮಾಜಿ ಸಿಎಂ ಹಾಗೂ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಇದೀಗ ತಾವು ಈ ಹಿಂದೆ ಅನುಭವಿಸುತ್ತಿದ್ದ ವಿಶೇಷ ಸವಲತ್ತುಗಳಲ್ಲಿ ಹಲವನ್ನು ಕಳೆದುಕೊಂಡಿದ್ದಾರೆ.

ಮೂರು ಬಾರಿ ಆಂಧ್ರ ಸಿಎಂ ಆಗಿ ರಾರಾಜಿಸಿದ್ದ, ಎನ್‍ಡಿಎ ಮೈತ್ರಿಕೂಟದಿಂದ ಹೊರಬಂದ ನಂತರ ಪ್ರಧಾನಿ ಮೋದಿಯ ಕಟು ಟೀಕಾಕಾರರಾಗಿ ಪರಿವರ್ತಿತರಾಗಿದ್ದ ಹಾಗೂ ವಿಪಕ್ಷಗಳನ್ನು ಒಗ್ಗೂಡಿಸಲು ಬಹಳಷ್ಟು ಶ್ರಮ ಪಟ್ಟಿದ್ದ ನಾಯ್ಡು  ಇದೀಗ ಝೆಡ್ ಪ್ಲಸ್ ಭದ್ರತೆ ಪಡೆಯುತ್ತಿದ್ದಾರಾದರೂ ಅವರಿಗೆ ಈಗ ವಿಮಾನ ನಿಲ್ದಾಣಗಳಲ್ಲಿ ವಿಐಪಿ ಗೇಟುಗಳ ಮೂಲಕ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ.

ಇಂದು ವಿಜಯವಾಡ ವಿಮಾನ ನಿಲ್ದಾಣಕ್ಕೆ ನಾಯ್ಡು ಆಗಮಿಸಿದಾಗ ಅವರ ವಾಹನವನ್ನು  ವಿಮಾನದ ಹತ್ತಿರ ತೆರಳಲು ಅನುಮತಿ ದೊರೆಯಲಿಲ್ಲ. ಅವರಿಗೆ ವಿಐಪಿ ಗೇಟ್ ಮೂಲಕ ಕೂಡ ಪ್ರವೇಶ ನಿರಾಕರಿಸಲಾಯಿತಲ್ಲದೆ ಅವರನ್ನು ಇತರ ಸಾಮಾನ್ಯ ಪ್ರಯಾಣಿಕರಂತೆಯೇ ತಪಾಸಣೆಗೊಳಪಡಿಸಲಾಯಿತು.

ಸಾಮಾನ್ಯ ನಾಗರಿಕರಂತೆ ಅವರು ಫೆರ್ರಿ ಬಸ್ ಮೂಲಕ ಇಂಡಿಗೋ ವಿಮಾನದ ತನಕ ತೆರಳಿದರು. ಝೆಡ್ ಪ್ಲಸ್ ಭದ್ರತೆ ಒದಗಿಸಲ್ಪಟ್ಟವರ ವಾಹನವನ್ನು ವಿಮಾನದ  ತನಕ ಹೋಗಲು ಅನುಮತಿಸಲಾಗುತ್ತದೆಯಾದರೂ ನಾಯ್ಡುಗೆ ನಿರಾಕರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News