ದ.ಕ.: ಶುಶ್ರೂಷಕರ ದಿನಾಚರಣೆಯಲ್ಲಿ ಸಾಧಕ, ನಿವೃತ್ತರಿಗೆ ಸನ್ಮಾನ

Update: 2019-06-15 09:55 GMT

ಮಂಗಳೂರು, ಜೂ.15: ಕರ್ನಾಟಕ ರಾಜ್ಯ ಶುಶ್ರೂಷಕರ ಸಂಘದ ಆಶ್ರಯದಲ್ಲಿ ದ.ಕ. ಜಿಲ್ಲಾ ಶಾಖೆ ವತಿಯಿಂದ ನಗರದ ವೆನ್ಲಾಕ್ ಆಸ್ಪತ್ರೆಯ ಆರ್‌ಎಪಿಸಿಸಿ ಸಭಾಂಗಣದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯಲ್ಲಿ ನಿವೃತ್ತರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶುಶ್ರೂಷಕರನ್ನು ಸನ್ಮಾನಿಸಲಾಯಿತು.

30ಕ್ಕೂ ಅಧಿಕ ವರ್ಷ ಶುಶ್ರೂಷಕರಾಗಿ ಸೇವೆ ಸಲ್ಲಿಸಿ ಪದೋನ್ನತಿ ಪಡೆಯದೆ ನಿವೃತ್ತರಾದ ಶಾರದಾ (31 ವರ್ಷಗಳ ಸೇವೆ), ಚಂಚಲಾಕ್ಷಿ (33 ವರ್ಷ ಸೇವೆ), ಗ್ರೇಸಿ ಫೆರ್ನಾಂಡಿಸ್(34)ರವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆ, ಕರಕುಶಲ, ಸಂಘಟನೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆಯೊಂದಿಗೆ ಹಲವು ಪ್ರಶಸ್ತಿಗಳನ್ನು ಸ್ವೀಕರಿಸಿರುವ ಸಾಧಕ ಶುಶ್ರೂಷಕರಾದ ಹರಿಣಿ ಪಿ., ಭವಾನಿ, ಸುಮಂಗಲ, ಸುನಂದಾ, ಫಿಲೋಮಿನಾ ಬೆರೆಟ್ಟೊ, ಸುಭಾಷಿಣಿ, ಶಶಿಕಲಾರನ್ನು ಗೌರವಿಸಲಾಯಿತು.

ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಆರ್.ವೆಂಕಟಾಚಲಪತಿ ಶುಶ್ರೂಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ನರ್ಸಿಂಗ್ ಘನತೆಯ ವೃತ್ತಿಯಾಗಿದ್ದು, ತಾಳ್ಮೆಯ ಸೇವೆಯೇ ಇಲ್ಲಿ ಬಹು ಮುಖ್ಯ ಎಂದು ಹೇಳಿದರು. ವೆನ್ಲಾಕ್ ಆಸ್ಪತ್ರೆಯಲ್ಲಿ ನಿವೃತ್ತರಾದಾಗ ಅವರ ಸ್ಥಾನಕ್ಕೆ ಹಾಗೂ ಹೊಸ ಶುಶ್ರೂಷಕರ ಹುದ್ದೆಗಳಿಗೆ ನೇಮಕಾತಿ ಆಗುತ್ತಿಲ್ಲ. ಈ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ಹೇಳಿದರು. ಶುಶ್ರೂಷಕ ಕ್ಷೇತ್ರ ಇಂದು ವ್ಯಾಪಕವಾಗಿ ವಿಸ್ತರಿಸಿದೆ. ನರ್ಸಿಂಗ್ ವೃತ್ತಿಯಾಗಿ ಆಲದ ಮರದಂತೆ ಬೆಳೆದು ನಿಂತಿದೆ. ಇಂತಹ ಸಂದರ್ಭದಲ್ಲಿ ಶುಶ್ರೂಷಕರು ವಿವಿಧ ವಿಶೇಷತೆಗಳಲ್ಲಿ ಹೆಚ್ಚಿನ ಅಧ್ಯಯನ ನಡೆಸ ಬೇಕು. ಆ ಮೂಲಕ ಪರಿಣತಿ ಹೆಚ್ಚಿಸಿಕೊಳ್ಳಬೇಕು. ಶುಶ್ರೂಷಕರಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆ ಎಂದು ಸರಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ಡಿಎಂಒ ಡಾ.ರಾಜೇಶ್ವರಿದೇವಿ ಹೇಳಿದರು.

ವೆನ್ಲಾಕ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಜೂಲಿಯಾ ಸಲ್ದಾನ, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸವಿತಾ, ದ.ಕ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ್ ನಾಯಕ್, ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಮಾಜಿ ಸೆನೆಟ್ ಸದಸ್ಯೆ ಐರಿನ್ ವೇಗಸ್, ದ.ಕ ಜಿಲ್ಲಾ ಸರಕಾರಿ ಶುಶ್ರೂಷಕರ ಸಂಘದ ಗೌರವ ಅಧ್ಯಕ್ಷೆ ಹರಿಣಿ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸರಕಾರಿ ನೌಕರರ ಸಂಘಕ್ಕೆ ಶುಶ್ರೂಷಕರ ಪ್ರತಿನಿಧಿಯಾಗಿ ಆಯ್ಕೆಯಾದ ಶಶಿಕಲಾ ಸ್ವಾಗತಿಸಿದರು. ಸರಕಾರಿ ಶುಶ್ರೂಷಕಿಯರ ಸಂಘದ ಅಧ್ಯಕ್ಷೆ ದೇವಕಿ ಗಾಣಿಗ ವಂದಿಸಿದರು. ಕಾರ್ಯದರ್ಶಿ ಮಹಾಲಕ್ಷ್ಮಿ ಪ್ರಾಸ್ತಾವಿಕ ಭಾಷಣ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News