ಶಾಸರ ನಿಧಿಯಲ್ಲಿ ಶೇ.5ರಷ್ಟು ಅನುದಾನ ವಿಶೇಷ ಮಕ್ಕಳಿಗೆ ಮೀಸಲು: ರಘುಪತಿ ಭಟ್

Update: 2019-06-15 15:38 GMT

ಮಣಿಪಾಲ, ಜೂ.15: ಕೇಂದ್ರ ಸರಕಾರ ಕಾನೂನಿಗೆ ತಿದ್ದುಪಡಿ ತಂದ ಹಿನ್ನೆಲೆಯಲ್ಲಿ ಶಾಸಕರ ನಿಧಿಯ ಶೇ.5ರಷ್ಟು ಅನುದಾನವನ್ನು ವಿಶೇಷ ಮಕ್ಕಳಿಗೆ ಮೀಸಲಿರಿಸಬೇಕಾಗಿದೆ ಎಂದು ಉಡುಪಿ ಕ್ಷೇತ್ರ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಏಜುಕೇಶನ್(ಮಾಹೆ) ಹಾಗೂ ಅರ್ಚನಾ ಟ್ರಸ್ಟ್‌ನ ಆಶ್ರಯದಲ್ಲಿ ಮಣಿಪಾಲ ಕೆಎಂಸಿಯ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಮಣಿಪಾಲದ ವಿಶೇಷ ಮಕ್ಕಳ ಪುನವರ್ಸತಿ ಕೇಂದ್ರ ‘ಆಸರೆ’ಯ ದಶಮಾನೋತ್ಸವ ಸಮಾರಂಭದಲ್ಲಿ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಅದೇ ರೀತಿ ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳು ತಮ್ಮ ಬಜೆಟ್‌ನಲ್ಲಿ ವಿಶೇಷ ಮಕ್ಕಳಿಗೆ ಶೇ.5ರಷ್ಟು ಅನುದಾನ ಮೀಸಲಿಡಬೇಕಾಗುತ್ತದೆ. ಸ್ಥಳೀಯ ಸಂಸ್ಥೆ ಗಳಿಂದ ಗರಿಷ್ಠ 50ಸಾವಿರ ರೂ.ವರೆಗೆ ನೆರವು ಒದಗಿಸಲು ಅವಕಾಶ ನೀಡ ಲಾಗಿದೆ. ಈ ನಿಟ್ಟಿನಲ್ಲಿ ಶಾಸಕರ ನಿಧಿ ಹಾಗೂ ನಗರಸಭೆಯಿಂದ ವಿಶೇಷ ಮಕ್ಕಳ ಸಂಸ್ಥೆಗಳಿಗೆ ಅನುದಾನ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದರು.

ತಾಳ್ಮೆ ವಹಿಸಿ ವಿಶೇಷ ಮಕ್ಕಳ ಸೇವೆ ಮಾಡುತ್ತಿರುವ ವಿಶೇಷ ಶಾಲಾ ಶಿಕ್ಷಕರ ಕೊಡುಗೆ ಅಪಾರ. ವಿಶೇಷ ಮಕ್ಕಳ ಬಗ್ಗೆ ಸಹಾನುಭೂತಿಗಿಂತ ಸಹಕಾರ ಹಾಗೂ ಗೌರವ ನೀಡುವುದು ಅತಿ ಅಗತ್ಯವಾಗಿದೆ. ಇಂದು ವಿಶೇಷ ಶಾಲೆಗಳು ಸಹಿತ ಅದಕ್ಕೆ ಬೇಕಾದ ಸಹಕರಾದ ಕೊರತೆ ಸಮಾಜದಲ್ಲಿ ಇದೆ ಎಂದು ಅವರು ಹೇಳಿದರು.

ಸಮಾರಂಭವನ್ನು ಉದ್ಘಾಟಿಸಿದ ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಮಾತನಾಡಿ, ವಿಶೇಷ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಬೇಕು. ಇಚ್ಛಾಶಕ್ತಿ ಇದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯ. ಆದುದರಿಂದ ವಿಶೇಷ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಪೋಷಕರು ಮಾಡಬೇಕು. ಸರಕಾರ ಅನುಮತಿ ನೀಡಿದ್ದಲ್ಲಿ ಅಂಬಲಪಾಡಿ ದೇವಸ್ಥಾನದ ವತಿಯಿಂದ ವಿಶೇಷ ಮಕ್ಕಳ ಸಂಸ್ಥೆಗಳಿಗೆ ದೊಡ್ಡ ಮಟ್ಟದ ಸಹಕಾರ ನೀಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಮಣಿಪಾಲ ಸಿಂಡಿಕೇಟ್ ಬ್ಯಾಂಕಿನ ಮಹಾ ಪ್ರಬಂಧಕ ಭಾಸ್ಕರ್ ಹಂದೆ, ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಉದ್ಯಮಿ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭ ದಲ್ಲಿ ಜಿಲ್ಲೆಯ ವಿವಿಧ ವಿಶೇಷ ಶಾಲೆಗಳ ಶಿಕ್ಷಕರು ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿಶೇಷ ಮಕ್ಕಳನ್ನು ಗೌರವಿಸಲಾಯಿತು.

ಆಸರೆ ಅಧ್ಯಕ್ಷ ಜೈವಿಠಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್‌ನ ಟ್ರಸ್ಟಿ ರಂಗ ಪೈ ಸ್ವಾಗತಿಸಿದರು. ಆಸರೆ ಸಂಚಾಲಕ ಪ್ರಕಾಶ್‌ಚಂದ್ರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News