ಮಂಗಳೂರು: ಕುಖ್ಯಾತ ಭೂಗತ ಪಾತಕಿ ಸೆರೆ

Update: 2019-06-15 12:58 GMT

ಮಂಗಳೂರು, ಜೂ.15: ಕುಖ್ಯಾತ ಭೂಗತ ಪಾತಕಿ, ಹಲವು ಪ್ರಕರಣಗಳ ಆರೋಪಿ ಅಸ್ಗರ್ ಆಲಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗೆ ನಕಲಿ ಪಾಸ್‌ಪೋರ್ಟ್ ನೀಡಿ ಸಹಕರಿಸಿದ ನವಾಝ್ ಮತ್ತು ರಶೀದ್ ಎಂಬರನ್ನೂ ಈ ಸಂದರ್ಭ ಬಂಧಿಸಲಾಗಿದೆ.

ಎರಡು ಕೊಲೆ ಪ್ರಕರಣಗಳು ಸೇರಿದಂತೆ ಒಂಬತ್ತು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಈತ 2007ರಲ್ಲಿ ನಕಲಿ ಪಾಸ್ ಪೋರ್ಟ್ ಬಳಸಿ ದುಬೈಗೆ ಪಲಾಯಗೈದು ತಲೆಮರೆಸಿಕೊಂಡಿದ್ದ.

ವಿದೇಶದಿಂದ ಊರಿಗೆ ಮರಳಿ ಕೇರಳದ ಉಪ್ಪಳದಲ್ಲಿ ಈತ ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ದೊರೆಯಿತು. ಕಂಕನಾಡಿ ಠಾಣೆಯ ಪೊಲೀಸ್ ಇನ್‌ಸೆಕ್ಟರ್ ಜಗದೀಶ್ ಹಾಗೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ಯಾಮಸುಂದರ್ ಅವರನ್ನೊಳಗೊಂಡ ತಂಡ ಭೂಗತ ಪಾತಕಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದುಬೈನಲ್ಲಿ ಈತ ನಡೆಸುತ್ತಿದ್ದ ಚಟುವಟಿಕೆಗಳ ಬಗ್ಗೆ  ವಿಚಾರಣೆ ನಡೆಯಲಿದೆ. ಭೂಗತ ಪಾತಕಿಯನ್ನು ದುಬೈಗೆ ಪಲಾಯನ ಮಾಡಲು ನಕಲಿ ಪಾಸ್ ಪೋರ್ಟ್ ನೀಡಿ ಸಹಕರಿಸಿದ ನವಾಝ್ ಮತ್ತು ರಶೀದ್ ಎಂಬರನ್ನು ಬಂಧಿಸಲಾಗಿದ್ದು, ಇವರಿಬ್ಬರೂ ನಕಲಿ ಪಾಸ್ ಪೋರ್ಟ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದು ಈ ಸಂಬಂಧ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News