ಆಲಪ್ಪುಳ: ಮನೆ ಸಮೀಪವೇ ಮಹಿಳಾ ಪೊಲೀಸ್ ಅಧಿಕಾರಿಯ ಸಜೀವ ದಹನ
Update: 2019-06-15 19:05 IST
ಆಲಪ್ಪುಳ, ಜೂ.15: ಸಹೋದ್ಯೋಗಿಯೊಬ್ಬ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಬೆಂಕಿ ಹಚ್ಚಿ ಕೊಂದಿರುವ ಘಟನೆ ಕೇರಳದ ಆಲಪ್ಪುಳದಲ್ಲಿ ನಡೆದಿದೆ. ಮೃತಪಟ್ಟ ಮಹಿಳಾ ಪೊಲೀಸ್ ಅಧಿಕಾರಿಯನ್ನು ಸೌಮ್ಯಾ ಪುಷ್ಪಾಕರನ್ ಎಂದು ಗುರುತಿಸಲಾಗಿದೆ.
ಆಕೆ ಕರ್ತವ್ಯ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ದುಷ್ಕರ್ಮಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ತಿಳಿದುಬಂದಿದೆ. ಬೆಂಕಿ ಹಚ್ಚಿದವನೂ ಕೂಡ ಪೊಲೀಸ್ ಸಿಬ್ಬಂದಿಯಾಗಿದ್ದು, ಆತನಿಗೆ 50 ಶೇ. ಸುಟ್ಟ ಗಾಯಗಳಾಗಿವೆ. ಆತನನ್ನು ವಶಕ್ಕೆ ಪಡೆಯಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತಪಟ್ಟ ಮಹಿಳೆ ಮೂರು ಮಕ್ಕಳ ತಾಯಿಯಾಗಿದ್ದಾರೆ. ಈ ದಾಳಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.