ನೀತಿ ಆಯೋಗದ ಸಭೆಗೆ ಮೂವರು ಮುಖ್ಯಮಂತ್ರಿಗಳು ಗೈರು

Update: 2019-06-15 14:57 GMT

ಹೊಸದಿಲ್ಲಿ, ಜೂ.15: ನೀತಿ ಆಯೋಗದ ಆಡಳಿತ ಸಮಿತಿಯ ಐದನೇ ಸಭೆ ರಾಷ್ಟ್ರಪತಿ ಭವನದಲ್ಲಿ ಶನಿವಾರ ನಡೆದಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಬಳಿಕ ನಡೆಯುವ ಮೊದಲ ಸಭೆ ಇದಾಗಿದೆ.

ಸಭೆಗೆ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ, ಕೆ ಚಂದ್ರಶೇಖರ ರಾವ್ ಮತ್ತು ಅಮರೀಂದರ್ ಸಿಂಗ್ ಗೈರು ಹಾಜರಾಗಿದ್ದರು. ರಾಜ್ಯಗಳು ಮುಂದಿಡುವ ಅಭಿವೃದ್ಧಿ ಕಾರ್ಯದ ಪ್ರಸ್ತಾವಗಳಿಗೆ ಆರ್ಥಿಕ ಬೆಂಬಲ ನೀಡುವ ಅಧಿಕಾರ ನೀತಿ ಆಯೋಗಕ್ಕಿಲ್ಲ. ಅಲ್ಲದೆ ಕೇಂದ್ರ ಸರಕಾರ ಮುಂದಿಡುವ ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ಮಾತ್ರ ಸಭೆಯಲ್ಲಿ ಚರ್ಚೆ ನಡೆಯುತ್ತದೆ. ಆದ್ದರಿಂದ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ತಮ್ಮ ರಾಜ್ಯದಲ್ಲಿ ನಿರ್ಮಿಸಲಾದ ನೀರಾವರಿ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಗ್ನವಾಗಿರುವುದರಿಂದ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಲಾಗಿದೆ. ಚಂದ್ರಶೇಖರ ರಾವ್ ಪ್ರಧಾನಿ ಮೋದಿಯವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲೂ ಪಾಲ್ಗೊಂಡಿರಲಿಲ್ಲ. ಆರೋಗ್ಯ ಹದಗೆಟ್ಟಿರುವ ಕಾರಣ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತಿಳಿಸಿದ್ದಾರೆ.

 ಸಭೆಯಲ್ಲಿ ಪಾಲ್ಗೊಳ್ಳುವ ಇತರ ನಾಲ್ಕು ಕಾಂಗ್ರೆಸ್ ಮುಖ್ಯಮಂತ್ರಿಗಳು ಹಾಗೂ ಕರ್ನಾಟಕದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯ ಜೊತೆ ಮಾಜಿ ಪ್ರಧಾನಿ, ಕಾಂಗ್ರೆಸ್ ಮುಖಂಡ ಮನಮೋಹನ್ ಸಿಂಗ್ ಸಭೆ ನಡೆಸಿ ಆಯಾ ರಾಜ್ಯಗಳ ಸ್ಥಿತಿಗತಿಯ ಬಗ್ಗೆ ಸಮಾಲೋಚನೆ ನಡೆಸಿದರು. ಈ ಹಿಂದಿನ ಯೋಜನಾ ಆಯೋಗದ ಬದಲು, 2014ರಲ್ಲಿ ಪ್ರಧಾನಿ ಮೋದಿಯ ಪ್ರಥಮ ಅಧಿಕಾರಾವಧಿಯಲ್ಲಿ ನೀತಿ ಆಯೋಗವನ್ನು ರೂಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News