ಎಸೆಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆಯಲು ಯೋಜನೆ: ದಿನಕರ ಬಾಬು

Update: 2019-06-15 15:31 GMT

ಉಡುಪಿ, ಜೂ.15: ಈ ಬಾರಿಯ ಎಸೆಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯದಲ್ಲಿ 5ನೆ ಸ್ಥಾನ ಪಡೆದಿದ್ದು, ಮುಂದಿನ ಬಾರಿ ಜಿಲ್ಲೆ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಈಗಿನಿಂದಲೇ ಯೋಜನೆ ರೂಪಿಸಿ, ಕಾರ್ಯೋನ್ಮುಖ ರಾಗಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.

ಉಡುಪಿ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಮುಂದಿನ ಬಾರಿ ಎಸೆಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆಯಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರು ಶಿಕ್ಷಣಾಧಿಕಾರಿಗಳನ್ನು ಪ್ರಶ್ನಿಸಿದರು.

ಈ ಕುರಿತು ಉತ್ತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ, ಜುಲೈನಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರಥಮ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಯಲ್ಲಿ ಹಿಂದುಳಿಯುವ ಮಕ್ಕಳಿಗೆ ವಿಶೇಷ ತರಗತಿ ಏರ್ಪಡಿಸಿ ಅವರ ಫಲಿತಾಂಶ ಸುಧಾರಣೆಗೆ ಯೋಜನೆ ರೂಪಿಸಲಾಗಿದೆ. ಅಲ್ಲದೇ ಡಿಸೆಂಬರ್ ಅಂತ್ಯದ ವೇಳಗೆ ಎಲ್ಲಾ ಪಾಠಗಳನ್ನು ಮುಗಿಸಿ, ಜನವರಿ ಯಿಂದ ರಿವಿಷನ್ ಮಾಡಲು ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿ ಗಳನ್ನು ಗುರುತಿಸಿ ಅವರಿಗೆ ವಿಶೇಷ ಕೋಚಿಂಗ್ ನೀಡಲು ಮತ್ತು ವಿದ್ಯಾರ್ಥಿ ಗಳಿಗೆ ಮೆಡಿಟೇಷನ್ ಶಿಬಿರ ನಡೆಸಲು ನಿರ್ಧರಿಸಲಾಗಿದೆ ಎಂದರು.

ಈ ವರ್ಷ ಜಿಲ್ಲೆಯಲ್ಲಿ ಸರಕಾರಿ ಆಂಗ್ಲ ಮಾಧ್ಯಮಕ್ಕಾಗಿ 22 ಶಾಲೆಗಳಿಗೆ ಅನುಮತಿ ದೊರೆತಿದೆ. ಜಿಲ್ಲೆಯಲ್ಲಿ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ಕುರಿತಂತೆ ಈಗಾಗಲೇ ಶೇ.86 ಪಠ್ಯ ಪುಸ್ತಕ ಬಂದಿದ್ದು, ಜೂನ್ ಅಂತ್ಯ ಅಥವಾ ಜುಲೈ ಪ್ರಾರಂಭದಲ್ಲಿ ಸಮವಸ್ತ್ರ ವಿತರಣೆ ನಡೆಯಲಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಡಳಿತದ ವತಿಯಿಂದ ವಿತರಿಸಲಾಗುತ್ತಿರುವ ಮರಳು ಶೇ.30ರಷ್ಟು ಕಲ್ಲು, ಮಣ್ಣಿನಿಂದ ಕೂಡಿದ್ದು, ಮನೆ ನಿರ್ಮಾಣ ಮಾಡುವ ಸಾರ್ವಜನಿಕರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಉತ್ತಮ ಗುಣಮಟ್ಟದ ಮರಳು ನೀಡಲು ಏಕೆ ಸಾಧ್ಯವಿಲ್ಲ ಎಂಬ ಅಧ್ಯಕ್ಷರ ಪ್ರಶ್ನೆಗೆ ಉತ್ತರಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ, ಪ್ರಸ್ತುತ ಜಿಲ್ಲಾಡಳಿತ ಗುರುತಿಸಿರುವ ಪ್ರದೇಶದಲ್ಲಿ ತೆಗೆಯುತ್ತಿರುವ ಮರಳಿನಲ್ಲಿ ಗುಣಮಟ್ಟ ಕಡಿಮೆ ಇದ್ದು, ಮುಂದೆ ಉತ್ತಮ ಮರಳು ದೊರೆಯುವ ಪ್ರದೇಶಗಳನ್ನು ಗುರುತಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್ ಮಾತನಾಡಿ, ಎಲ್ಲಾ ಗ್ರಾಪಂಗಳು ತೆರಿಗೆ ಸಂಗ್ರಹಣೆಯಲ್ಲಿ ಶೇ.100 ಗುರಿ ಸಾಧಿಸಬೇಕು. ಪ್ರತಿ ತಿಂಗಳು ನಿಯಮಿತವಾಗಿ ತೆರಿಗೆ ಸಂಗ್ರಹಿಸಿ ಹಾಗೂ ಗ್ರಾಪಂ ಕಟ್ಟಡಗಳ ಬಾಡಿಗೆ ವಸೂಲಾತಿಯಲ್ಲಿ ಕೂಡ ಶೇ.100 ಗುರಿ ಸಾಧಿಸಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಅಳವಡಿಸಿರುವ ಮೊಬೈಲ್ ಟವರ್‌ಗಳ ತೆರಿಗೆಯನ್ನೂ ಕೂಡ ಕಡ್ಡಾಯವಾಗಿ ಸಂಗ್ರಹಿಸಬೇಕು ಎಂದು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಉಪಾದ್ಯಕ್ಷೆ ಶೀಲಾ ಶೆಟ್ಟಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಂತ ಪಡುಬಿದ್ರೆ, ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿ ಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

ಮುಂಗಾರು ವಿಳಂಬ: ಭತ್ತದ ನಾಟಿಗೆ ಅಡ್ಡಿ

ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿದ್ದು, ಭತ್ತದ ನಾಟಿ 15 ದಿನ ಮುಂದೆ ಹೋಗಲಿದೆ. ಜಿಲ್ಲೆಯಲ್ಲಿ ಭತ್ತದ ಬೀಜದ ದಾಸ್ತಾನು ಇದ್ದು, ಯಾವುದೇ ಕೊರೆತೆ ಇಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ತಿಳಿಸಿದ್ದಾರೆ.

ಪ್ರದಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಇದ್ದ ನಿಯಮಗಳನ್ನು ಸರಳ ಗೊಳಿಸಿದ್ದು, ಎಲ್ಲಾ ರೈತರು ಈ ಯೋಜನೆಯ ಪ್ರಯೋಜನ ಪಡೆಯಬಹು ದಾಗಿದೆ. ಭತ್ತದ ಬೆಳೆ ವಿಮೆ ಮಾಡಲು ಜು.31 ಕೊನೆಯ ದಿನಾಂಕವಾಗಿದೆ ಎಂದು ಅವರು ಮಾಹಿತಿ ನೀಡಿದರು.

ತೋಟಗಾರಿಕಾ ಇಲಾಖೆ ವತಿಯಿಂದ 94000 ಗಿಡಗಳು ವಿತರಣೆಗೆ ಸಿದ್ದವಿದ್ದು, ಮಳೆ ವಿಳಂಬದಿಂದ ಪ್ಲಾಂಟೇಶನ್ ಕಾರ್ಯ ಕಡಿಮೆ ಇದೆ. ಅಡಿಕೆ ಮತ್ತು ಕಾಳು ಮೆಣಸು ಬೆಳೆಗೆ ವಿಮಾ ಯೋಜನೆ ಜಾರಿಯಲ್ಲಿದ್ದು, ನೊಂದಣಿಗೆ ಜೂ.30 ಕೊನೆಯ ದಿನಾಂಕವಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News