ಸರಕಾರಿ ಹಾಸ್ಟೆಲ್‌ಗಳ ನಿರ್ವಹಣೆ ಹೊಣೆ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಲು ಸಚಿವ ಖಾದರ್ ಸಲಹೆ

Update: 2019-06-15 15:38 GMT

ಮಂಗಳೂರು, ಜೂ.15: ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳನ್ನು ಗುರುತಿಸಿ ಅವುಗಳಿಗೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಹಾಸ್ಟೆಲ್‌ಗಳ ನಿರ್ವಹಣೆಯ ಹೊಣೆ ನೀಡಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಐಟಿಡಿಪಿ ಇಲಾಖೆಯ ಹಾಸ್ಟೆಲ್‌ಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ‘ಸರಕಾರಿ ಹಾಸ್ಟೆಲ್‌ನಲ್ಲಿ ಆರ್ಥಿಕವಾಗಿ ಬಡ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ಮತ್ತು ವಸತಿ ಸೌಲಭ್ಯ ಒದಗಿಸಬೇಕು. ಕಳಪೆ ಆಹಾರ ಸಾಮಾಗ್ರಿ, ತರಕಾರಿ ಪೂರೈಕೆಯಾಗದಂತೆ ಎಚ್ಚರವಹಿಸಬೇಕು. ಲಯನ್ಸ್, ರೋಟರಿ, ಜೇಸಿಸ್, ಮಹಿಳಾ ಮಂಡಲ ಸೇರಿದಂತೆ ಪ್ರತಿಷ್ಠಿತ ಸರಕಾರೇತರ ಸಂಘಗಳಿಗೆ ಹಾಸ್ಟೆಲ್‌ನ ಉಸ್ತುವಾರಿ ನೀಡಬೇಕು. ಇದರಿಂದ ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗಬಹುದು. ಅಲ್ಲದೆ ಆ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳನ್ನು ಹಾಸ್ಟೆಲ್‌ನಲ್ಲೇ ನಡೆಸಲು ಅವಕಾಶ ಕಲ್ಪಿಸಬಹುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್: ದ.ಕ.ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ 73 ಹಾಸ್ಟೆಲ್‌ಗಳ ಪೈಕಿ 39 ಸ್ವಂತ ಹಾಗೂ 30 ಬಾಡಿಗೆ ಕಟ್ಟಡದಲ್ಲಿವೆ. 4 ಹಾಸ್ಟೆಲ್‌ಗಳು ಉಚಿತವಾಗಿ ದೊರೆತ ಕಟ್ಟಡದಲ್ಲಿವೆ. 24 ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗಳಲ್ಲಿ 1,081 ಹಾಗೂ 49 ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ 4,501 ವಿದ್ಯಾರ್ಥಿಗಳಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಸಚಿನ್ ಕುಮಾರ್ ಮಾಹಿತಿ ನೀಡಿದರು.

ಹೊಸ ಹಾಸ್ಟೆಲ್‌ಗೆ ಬೇಡಿಕೆ: ಹಿಂದುಳಿದ ವರ್ಗದ ಹಾಸ್ಟೆಲ್‌ಗಳಿಗೆ 1,500 ಹೆಚ್ಚುವರಿ ಅರ್ಜಿಗಳು ಬಂದಿವೆ. ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಸಾಧ್ಯವಾಗಿಲ್ಲ. ಬಂಟ್ವಾಳದಲ್ಲಿ 2 ಹಾಗೂ ಮುಚ್ಚೂರಿನಲ್ಲಿ 1 ಹಾಸ್ಟೆಲ್ ಸ್ಥಾಪಿಸಲು ಬೇಡಿಕೆ ಇವೆ. ಇಲಾಖೆಯ ವತಿಯಿಂದ 72,595 ಮೆಟ್ರಿಕ್‌ಪೂರ್ವ ಹಾಗೂ 28,220 ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಒದಗಿಸಲಾಗಿದೆ. ಇಲಾಖೆಯ 92 ಸಮುದಾಯ ಭವನಗಳ ಪೈಕಿ 43 ಪೂರ್ಣಗೊಂಡಿವೆ. 24 ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿನ್ ಕುಮಾರ್ ತಿಳಿಸಿದರು.

ಅಂಬೇಡ್ಕರ್ ಭವನ ಶೀಘ್ರ: ಉರ್ವಸ್ಟೋರ್‌ನಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಅಂಬೇಡ್ಕರ್ ಭವನದ ಕಾಮಗಾರಿ ಅಂತಿಮ ಹಂತದಲ್ಲಿದೆ. 15 ಕೋ.ರೂ. ಅನುದಾನ ಬಿಡುಗಡೆಯಾಗಿದ್ದು, 3.50 ಕೋ.ರೂ. ಅನುದಾನದ ಅಗತ್ಯವಿದೆ. ತಾಲೂಕು ಹಾಗೂ ಹೋಬಳಿ ಮಟ್ಟದ ಅಂಬೇಡ್ಕರ್ ಭವನಗಳಿಗೆ ಮಂಜೂರಾದ 38 ಕೋ.ರೂ. ಅನುದಾನದ ಪೈಕಿ 19 ಕೋ.ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಯೋಗೀಶ್‌ಕುಮಾರ್ ಮಾಹಿತಿ ನೀಡಿದರು.

ಕಾಂಪ್ಲೆಕ್ಸ್ ಸಹಿತ ಹಾಸ್ಟೆಲ್: ನಗರದ ಕೊಡಿಯಾಲ್ ಬೈಲ್‌ನಲ್ಲಿರುವ ಕುದ್ಮಲ್ ರಂಗರಾವ್ ವಿದ್ಯಾರ್ಥಿನಿ ಭವನ ಕಟ್ಟಡವನ್ನು ಕೆಡವಲು ಸೂಚಿಸಲಾಗಿದೆ. ಅಲ್ಲಿ 13 ಕೋ.ರೂ.ವೆಚ್ಚದಲ್ಲಿ 4 ಅಂತಸ್ತಿನ ಹೊಸ ಹಾಸ್ಟೆಲ್ ಕಟ್ಟಡ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಖಾದರ್ ‘ಹಾಸ್ಟೆಲ್ ಇರುವ ಜಾಗ ನಗರದ ಹೃದಯ ಭಾಗದಲ್ಲಿದೆ. ಅಲ್ಲಿ ಕೇವಲ ಹಾಸ್ಟೆಲ್ ಕಟ್ಟಡ ನಿರ್ಮಿಸಬೇಡಿ. ಕೆಳಗೆ ವಾಣಿಜ್ಯ ಮಳಿಗೆ ಸಹಿತ ಇರುವ ಕಟ್ಟಡ ನಿರ್ಮಿಸಿ. ಇದರಿಂದ ಇಲಾಖೆಗೆ ಆದಾಯ ಬರುತ್ತದೆ’ ಎಂದು ತಿಳಿಸಿದರು.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಉಸ್ಮಾನ್, ಐಟಿಡಿಪಿ ಅಧಿಕಾರಿ ಹೇಮಲತಾ ಇಲಾಖೆಯ ಹಾಸ್ಟೆಲ್‌ಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ರವಿಚಂದ್ರನ್ ನಾಯಕ್, ತಹಶೀಲ್ದಾರ್ ಗುರುಪ್ರಸಾದ್‌ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News