ಮಂಗಳೂರು: ‘ಸ್ವಚ್ಛ ಮನಸ್’ ಕಾರ್ಯಕ್ರಮ ಉದ್ಘಾಟನೆ

Update: 2019-06-15 15:43 GMT

ಮಂಗಳೂರು, ಜೂ.15: ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವುದರಿಂದ ಮುಂದಿನ ಜನಾಂಗಕ್ಕೆ ಉಪಯೋಗವಾಗಲಿದೆ. ಅಲ್ಲದೆ ಇದರಿಂದ ಮಕ್ಕಳ ಮೇಲೆ ಅಪಾರ ಪರಿಣಾಮ ಬೀರಲಿದೆ. ಸ್ವಚ್ಛ ಭಾರತಕ್ಕಾಗಿ ಹೆಚ್ಚಿನ ಪ್ರಜ್ಞೆಯೂ ಬೆಳೆಯಲಿದೆ ಎಂದು ಎಂಆರ್‌ಪಿಎಲ್ ಗ್ರೂಪ್ ಜನರಲ್ ಮ್ಯಾನೇಜರ್ (ಸಿಎಸ್‌ಆರ್) ಬಿ.ಎಚ್.ವಿ.ಪ್ರಸಾದ್ ಅಭಿಪ್ರಾಯಪಟ್ಟರು.

ರಾಮಕೃಷ್ಣ ಮಿಷನ್ ವತಿಯಿಂದ ನಡೆಯುತ್ತಿರುವ ಐದನೇ ಹಂತದ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಶನಿವಾರ ನಗರದ ರಾಮಕೃಷ್ಣ ಮಠದಲ್ಲಿ ಸ್ವಚ್ಛ ಮನಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿಯ ಕನಸು ನನಸು ಮಾಡುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದರು. ಅದನ್ನು ಸ್ವೀಕರಿಸಿದ ಮಂಗಳೂರು ರಾಮಕೃಷ್ಣ ಮಠ ಸಮಾಜದ ಎಲ್ಲ ವರ್ಗದ ಜನರನ್ನು ಸೇರಿಸಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ ಯಶಸ್ವಿಯಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಸ್ವಚ್ಛತೆಗಾಗಿ ಜಾದೂ ಪ್ರದರ್ಶನ ಉದ್ಘಾಟಿಸಿದರು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ.ಶಿವರಾಮಯ್ಯ, ಜಾದೂಗಾರ ಕುದ್ರೋಳಿ ಗಣೇಶ್ ಉಪಸ್ಥಿತರಿದ್ದರು.

ಸ್ವಚ್ಛ ಮನಸ್ ಕಾರ್ಯಕ್ರಮದ ಸಂಯೋಜಕ ರಂಜನ್ ಬಿ.ಯು.ಸ್ವಾಗತಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸ್ವಚ್ಛತೆಗಾಗಿ ಜಾದೂ: ಸಭಾ ಕಾರ್ಯಕ್ರಮದ ಬಳಿಕ ಜಾದೂಗಾರ ಕುದ್ರೋಳಿ ಗಣೇಶ್ ಸ್ವಚ್ಛತಾ ಸಂದೇಶ ನೀಡುವ ವಿವಿಧ ಮ್ಯಾಜಿಕ್‌ಗಳನ್ನು ಪ್ರದರ್ಶಿಸಿದರು. ಸುಮಾರು ಒಂದು ಗಂಟೆ ಕಾಲ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಕುರಿತು ಜಾಗೃತಿಗೊಳಿಸಿದರು. ನಗರದ ವಿವಿಧೆಡೆಯ 10 ಶಾಲೆಗಳ 650 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆ 100 ಶಾಲೆಗಳಲ್ಲಿ ಜಾದೂ ಪ್ರದರ್ಶನ ಆಯೋಜಿಸುವ ಮೂಲಕ 75 ಸಾವಿರ ಮಕ್ಕಳನ್ನು ತಲುಪುವ ಉದ್ದೇಶ ಹೊಂದಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News