ಸರಕಾರಿ ಹುದ್ದೆಗಳಿಗೆ ಮೀಸಲಾತಿ ವಿಸ್ತರಿಸದ ಮೋದಿ ಸರಕಾರ: ದಲಿತ ಐಎಎಸ್, ಐಆರ್‌ಎಸ್ ಅಧಿಕಾರಿಗಳ ಆಕ್ರೋಶ

Update: 2019-06-15 15:50 GMT

ಹೊಸದಿಲ್ಲಿ, ಜೂ.15: ನಾಗರಿಕ ಸೇವಾ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರತಿಭೆಗಳನ್ನು ನೇಮಕ ಮಾಡುವ ಮೂಲಕ ಈ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ವಿಸ್ತರಿಸದಿರುವ ಮೋದಿ ಸರಕಾರದ ನಿರ್ಧಾರ ದಲಿತ ಹಾಗೂ ಇತರ ಮಾಜಿ ಮತ್ತು ಸೇವೆಯಲ್ಲಿರುವ ಐಎಎಸ್ ಮತ್ತು ಐಆರ್‌ಎಸ್ ಅಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ವರ್ಷದ ಆರಂಭದಲ್ಲಿ ಕೇಂದ್ರ ಸರಕಾರಿ ಸೇವಾ ಆಯೋಗ (ಯುಪಿಎಸ್ಸಿ) ನೇಮಕ ಮಾಡಿದ ಒಂಬತ್ತು ನೇರ ಪ್ರವೇಶಾತಿಗಳಲ್ಲಿ ಒಬ್ಬರೂ ಮೀಸಲಾತಿ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಇತರ ಹಿಂದುಳಿದ ವರ್ಗಗಳಿಗೆ ಸೇರಿಲ್ಲ ಎಂದು ಮಾಜಿ ಬಿಜೆಪಿ ಸಂಸದ ಉದಿತ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರದ ಈ ನಡೆಯನ್ನು ಸಂಸತ್ ಮತ್ತು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ ಎಂದು ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಮಾಜಿ ಅಧಿಕಾರಿಯೂ ಆಗಿರುವ ಉದಿತ್ ರಾಜ್ ತಿಳಿಸಿದ್ದಾರೆ.

 ಸರಕಾರ ಯಾವ ರೀತಿ ಮೀಸಲಾತಿಯನ್ನು ಕಸದ ತೊಟ್ಟಿಗೆ ಎಸೆಯಲು ಯತ್ನಿಸುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ಹಿರಿಯ ಐಎಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸರಕಾರ, ಖಾಸಗಿ ವಲಯದಿಂದ ನೇರ ಪ್ರವೇಶವನ್ನು ಕೇವಲ ವೈಯಕ್ತಿಕ ಸ್ಥಾನಗಳಿಗಾಗಿ ಮಾಡಲಾಗುತ್ತದೆ ಮತ್ತು ಒಂಟಿ ಹುದ್ದೆಗಳಿಗೆ ಮೀಸಲಾತಿ ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ. ಖಾಸಗಿ ವಲಯದ ವ್ಯಕ್ತಿಗಳ ನೇಮಕಾತಿಯ ಎರಡನೇ ಭಾಗದಲ್ಲಿ 40 ಪರಿಣತ ನಿರ್ದೇಶಕರು ಮತ್ತು ಸಹಾಯಕ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಿರುವ ಸರಕಾರ ಈ ಹುದ್ದೆಗಳಿಗೆ ಮೀಸಲಾತಿ ವಿಸ್ತರಿಸದಿರಲು ನಿರ್ಧರಿಸಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದೆ.

ಆದರೆ ಇಲಾಖೆಯ ತನ್ನದೇ ನಿಯಮದ ಪ್ರಕಾರ, 45 ದಿನಗಳಿಗಿಂತ ಕಡಿಮೆ ಅವಧಿಗೆ ಮಾಡಿರುವ ಸರಕಾರಿ ನೇಮಕಗಳು ಮಾತ್ರ ಮೀಸಲಾತಿಯಿಂದ ಹೊರಗಿರುತ್ತವೆ. ಆದರೆ ಇದಕ್ಕೂ ಸಮಜಾಯಿಷಿ ನೀಡಿರುವ ಇಲಾಖೆ, ಒಂದು ಹುದ್ದೆಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಖಾಸಗಿ ಪ್ರವೇಶದಡಿ ನಡೆಯುವ ಒಪ್ಪಂದ ಸರಕಾರ ಮತ್ತು ವ್ಯಕ್ತಿಯ ಮಧ್ಯೆಯಾಗಿರುತ್ತದೆ. ಹಾಗಾಗಿ ಮೀಸಲಾತಿ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.

ಇದನ್ನು ಮೀಸಲಾತಿ ಕಾನೂನಿನ ದುರ್ಬಲೀಕರಣ ಎಂದು ವ್ಯಾಖ್ಯಾನಿಸಿರುವ ಉದಿತ್ ರಾಜ್, ದಲಿತರು ಮತ್ತು ಒಬಿಸಿಗಳಲ್ಲಿ ಪ್ರತಿಭೆ, ಅನುಭವ ಮತ್ತು ಪ್ರಾಮಾಣಿಕತೆಗೆ ಯಾವ ಕೊರತೆಯೂ ಇಲ್ಲ. ಆದರೂ ನೀವು ಯಾಕೆ ಮೀಸಲಾತಿಯನ್ನು ತೆಗೆದುಹಾಕಲು ದಾರಿಗಳನ್ನು ಹುಡುಕುತ್ತಿದ್ದೀರಿ ಎಂದು ಸರಕಾರವನ್ನು ಪ್ರಶ್ನಿಸಿದ್ದಾರೆ.

ತನ್ನ ನಿರ್ಧಾರವನ್ನು ಸಮರ್ಥಿಸಲು ಸರಕಾರ ಎಷ್ಟು ಬೇಕಾದರೂ ಸಬೂಬುಗಳನ್ನು ನೀಡಬಹುದು. ಆದರೆ ವಾಸ್ತವದಲ್ಲಿ, ಸರಕಾರಿ ಹುದ್ದೆಗಳಿಗೆ ಮೀಸಲಾತಿ ನೀಡದಿರುವುದು ಸಂವಿಧಾನದ ಆಶಯದ ವಿರುದ್ಧವಾಗಿದೆ. ಸರಕಾರದ ನಿಯಮಗಳು ಇವರಿಗೆ ಅನ್ವಯವಾಗುವುದಿಲ್ಲ ಎಂದಾದರೆ ಅವರನ್ನು ಸರಕಾರಿ ಹುದ್ದೆಗಳಿಗೆ ನೇಮಕ ಮಾಡುವುದಾದರೂ ಯಾಕೆ? ಕೇವಲ ಸಲಹೆಗಾರರನ್ನಾಗಿ ನೇಮಿಸಬಹುದಲ್ಲವೇ? ಎಂದು ಹಿರಿಯ ದಲಿತ ಅಧಿಕಾರಿ ಸರಕಾರವನ್ನು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News