ಕಾರ್ನಾಡ್ ನಾಟಕಗಳಿಂದ ರಂಗಭೂಮಿಯ ಪುನಶ್ಚೇತನ: ಚಂದ್ರಹಾಸ ಉಳ್ಳಾಲ್

Update: 2019-06-15 15:54 GMT

ಉಳ್ಳಾಲ, ಜೂ.15: ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯ ಮತ್ತು ರಂಗಭೂಮಿಗೆ ನೀಡಿದ ಕೊಡುಗೆ ಅನನ್ಯ. ಈ ಮೂಲಕ ಅವರು ರಂಗಭೂಮಿಯ ಪುನಶ್ಚೇತನಕ್ಕೆ ಕಾರಣಕರ್ತ ರಾಗಿದ್ದರು ಎಂದು ಹಿರಿಯ ರಂಗಕರ್ಮಿ ಚಂದ್ರಹಾಸ ಉಳ್ಳಾಲ ಹೇಳಿದರು.

ಎಸ್‌ಐಒ, ಮೇಲ್ತೆನೆ ಮತ್ತು ಕಲ್ಲಚ್ಚು ಪ್ರಕಾಶನ ಇತ್ತೀಚೆಗೆ ತೊಕ್ಕೊಟ್ಟಿನಲ್ಲಿ ಹಮ್ಮಿಕೊಂಡ ‘ಕನ್ನಡದ ಹೆಮ್ಮೆ:ಗಿರೀಶ್ ಕಾರ್ನಾಡ್-ಒಂದು ನೆನಪು’ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ನಾಟಕ ರಂಗಕ್ಕೆ ಅಂತಾರಾಷ್ಟ್ರೀಯ ಮಣ್ಣನೆ ಒದಗಿಸಿದ ಮಹಾನ್ ನಾಟಕಕಾರ ಕಾರ್ನಾಡ್ ಒಂದು ವೇಳೆ ಲಂಡನ್‌ನಲ್ಲಿ ಜನಿಸಿದ್ದರೆ ಶೇಕ್ಸೃ್ಪಿಯರ್‌ನಂತಹ ಸಾರ್ವಕಾಲಿಕ ಶ್ರೇಷ್ಠ ನಾಟಕಕಾರರ ಸಾಲಿನಲ್ಲಿ ನಿಲ್ಲುತ್ತಿದ್ದರೇನೋ? ಓರ್ವ ಜವಾಬ್ದಾರಿಯುತ ಸಾಹಿತಿ ತನ್ನ ಕಾಲದ ದುರಂತಗಳಿಗೆ ಯಾವ ರೀತಿಯಲ್ಲಿ ಪ್ರತಿ ಸ್ಪಂದಿಸಬೇಕು ಎನ್ನುವುದಕ್ಕೆ ಕಾರ್ನಾಡ್ ನಮ್ಮ ಮುಂದೆ ಒಂದು ಮಾದರಿಯನ್ನು ಬಿಟ್ಟು ಹೋಗಿದ್ದಾರೆ ಎಂದು ಲೇಖಕ ಇಸ್ಮತ್ ಪಜೀರ್ ಹೇಳಿದರು.

ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥ ಮಹೇಶ್ ಆರ್. ನಾಯಕ್ ಮಾತನಾಡಿ ಸಾವಿಗೆ ಸಂಭ್ರಮಿಸುವ ವಿಕೃತಿ ನಮ್ಮ ನೈತಿಕ ಅಧಃಪತನವನ್ನು ತೋರಿಸುತ್ತದೆ. ಇದೊಂದು ಆಧುನಿಕ ರಾಜಕೀಯ ಪಲ್ಲಟದ ದುರಂತ. ಮೃತ ವ್ಯಕ್ತಿಯ ಸಾಧನೆಗಳು ಮತ್ತು ಒಳಿತುಗಳ ಕುರಿತು ಮಾತನಾಡುವುದು ಮತ್ತು ಆರ್ದಶ ಪಾಲಿಸುವುದು ಭಾರತೀಯ ಸಂಸ್ಕೃತಿಯಾಗಬೇಕು. ಆದರೆ ವಿಕೃತಿಗಳು ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮಾಅತೇ ಇಸ್ಲಾಮೀ ಹಿಂದ್ ಉಳ್ಳಾಲ ಘಟಕದ ಅಧ್ಯಕ್ಷ ಅಬ್ದುಲ್ ಕರೀಂ ಸಾಹಿತಿ ಗಿರೀಶ್ ಕಾರ್ನಾಡ್ ತಮ್ಮ ಕಾರ್ಯಗಳಲ್ಲಿ ತೋರುತ್ತಿದ್ದ ಬದ್ಧತೆ ಮತ್ತು ಭಾರತದ ಜಾತ್ಯತೀತ ಸ್ವರೂಪದ ಉಳಿವಿಗಾಗಿ ತೀವ್ರ ಅನಾರೋಗ್ಯದ ನಡುವೆಯೂ ಅವರು ಶ್ರಮಿಸುತ್ತಿದ್ದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಯುವ ಲೇಖಕ ಅಶೀರುದ್ದೀನ್ ಮಂಜನಾಡಿ ಸ್ವಾಗತಿಸಿರು. ಎಸ್‌ಐಒ ಉಳ್ಳಾಲ ಘಟಕಾಧ್ಯಕ್ಷ ನಿಝಾಮುದ್ದೀನ್ ಉಮರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News